*ಎಐ ಯುಗದಲ್ಲೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ: ಲಕ್ಷ್ಮೀ ಹೆಬ್ಬಾಳಕರ್*

*ಹೊನ್ನಿಹಾಳದಲ್ಲಿ ಭಕ್ತಿಭಾವದ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ*
ಪ್ರಕೃತಿ ಬೆಳಗಾವಿ ಸುದ್ದಿ : ಹೊನ್ನಿಹಾಳ (ಬೆಳಗಾವಿ): ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಆಧುನಿಕ ಯುಗದಲ್ಲೂ ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ತಾಲೂಕಿನ ಹೊನ್ನಿಹಾಳ ಹಾಗೂ ಪಂತನಗರದ ವತಿಯಿಂದ ಆಯೋಜಿಸಲಾಗಿದ್ದ ನೂತನ ಶ್ರೀ ಮಹಾಗಣಪತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ, ಬ್ರಹ್ಮಕಳಸಾಭಿಷೇಕ ಹಾಗೂ ಮಹಾಪೂರ್ಣಾಹುತಿ ಪೂಜಾ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯರು ತಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ಅಪಾರ ಮಹತ್ವ ನೀಡುತ್ತಾರೆ. ನಮ್ಮ ಸಂಸ್ಕೃತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲ. ದೇವರು, ಸ್ವಾಮಿಗಳು ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಭಾರತೀಯರಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ದೇವರ ಕಾರ್ಯವೆಂದರೆ ಎಲ್ಲವನ್ನೂ ಬದಿಗಿಟ್ಟು ಭಕ್ತಿಯಿಂದ ಪಾಲ್ಗೊಳ್ಳುವ ಪರಂಪರೆ ನಮ್ಮದಾಗಿದೆ ಎಂದು ಅವರು ಹೇಳಿದರು.
ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ವಿಘ್ನವಿನಾಶಕ ಗಣಪತಿಯನ್ನು ಪೂಜಿಸುವುದು ನಮ್ಮ ಸಂಪ್ರದಾಯ. ವಿಘ್ನಗಳು ನಿವಾರಣೆಯಾಗಲಿ, ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿ ಎಂಬ ಸಂಕಲ್ಪದೊಂದಿಗೆ ಗಣಪತಿಯ ಆಶೀರ್ವಾದ ಪಡೆದು ಕೆಲಸ ಆರಂಭಿಸುತ್ತೇವೆ. ಇಂತಹ ಪವಿತ್ರ ಸ್ಥಳದಲ್ಲಿ, ಪವಿತ್ರ ವಾತಾವರಣದಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿಯೊಂದಿಗೆ ಮಹಾಗಣಪತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿರುವುದು ಸಂತಸದ ಸಂಗತಿ ಎಂದರು.
ಎಐ ಯುಗದಲ್ಲೂ ಭಾರತೀಯತೆ ಉಳಿದಿದೆ
ಇಂದು ನಾವು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ ಆಧುನಿಕತೆಯನ್ನು ಅಪ್ಪಿಕೊಂಡರೂ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮರೆಯದೆ ಮುನ್ನಡೆಯುತ್ತಿದ್ದೇವೆ. ಇದು ನಮ್ಮ ಸಂಸ್ಕೃತಿಯ ಶಕ್ತಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಾವು ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಆರಂಭದಿಂದಲೂ ಜನರ ಕೆಲಸಗಳನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಮನೆಮಗಳಾಗಿ ಜನರು ಹೇಳಿದ ಕೆಲಸಗಳನ್ನು ಸಾಧ್ಯವಾದಷ್ಟು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಡೀ ಕ್ಷೇತ್ರವನ್ನು ನನ್ನ ಮನೆಯೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಮತ್ತೊಂದು ಅಗತ್ಯ ಎದುರಾಗುತ್ತದೆ. ಆದರೂ ಯಾವುದೇ ಬೇಸರವಿಲ್ಲದೆ ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.
ಸೋಲಿನಿಂದ ಎದೆಗುಂದದೆ ಜನರ ವಿಶ್ವಾಸ ಗಳಿಸಿದ್ದೇನೆ
ನಾನು ಕೇವಲ ಮಾತಿನಿಂದಲ್ಲ, ಕೆಲಸ ಮಾಡುವ ಮೂಲಕ ಈ ಸ್ಥಾನಕ್ಕೆ ಬಂದಿದ್ದೇನೆ. ರಾಜಕೀಯ ಜೀವನದಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಎದೆಗುಂದಲಿಲ್ಲ. ಜನರೊಂದಿಗೆ ನಿರಂತರವಾಗಿ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ವಿಶ್ವಾಸ ಗಳಿಸಿ ಇಂದು ಈ ಮಟ್ಟಕ್ಕೆ ಬಂದಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇನ್ನೂ ಬಾಕಿ ಇರುವ ಅಗತ್ಯ ಕಾಮಗಾರಿಗಳನ್ನೂ ಹಂತ ಹಂತವಾಗಿ ಕೈಗೊಂಡು ಪೂರ್ಣಗೊಳಿಸುವ ಭರವಸೆ ನೀಡಿದರು.
ಸೈನಿಕರ ಸಾಂಸ್ಕೃತಿಕ ಭವನ ನಿರ್ಮಾಣದ ಭರವಸೆ
ಹೊನ್ನಿಹಾಳ ಗ್ರಾಮದಲ್ಲಿ ಸೈನಿಕರ ಸಾಂಸ್ಕೃತಿಕ ಭವನ ನಿರ್ಮಿಸಿಕೊಡುವುದಾಗಿ ಈ ಹಿಂದೆ ನೀಡಿರುವ ಭರವಸೆಗೆ ತಾವು ಬದ್ಧರಾಗಿರುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಜನರು ಯಾವುದೇ ಕೆಲಸವನ್ನು ತಮ್ಮ ಗಮನಕ್ಕೆ ತಂದರೂ, ಸಾಧ್ಯವಾದಷ್ಟು ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನನ್ನ ಶಕ್ತಿಯಾಗಿದ್ದು, ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಪರಮಪೂಜ್ಯ ಶ್ರೀ ಬಸವರಾಜ ದೇವರು, ಬೃಹನ್ಮಠ ಹೊನ್ನಿಹಾಳ, ಕೃಷ್ಣ ತೇನಗಿ, ಬಸನಗೌಡ ಪಾಟೀಲ, ನಾಗೇಶ ದೇಸಾಯಿ, ರವಿ ಮಠದ, ಭರಮಾ ಕಟಬುಗೋಳ, ನಾಗಪ್ಪ ಕಟಬುಗೋಳ, ಸುರೇಶ ನಾವಿ, ಮಹಾಬಲೇಶ್ವರ ಗುಡಕಟ್ಟಿ ಸೇರಿದಂತೆ ಗಣ್ಯರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶ್ರೀ ಮಹಾಗಣಪತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದ್ದು, ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.*******************************











