ಪ್ರಕೃತಿ ಬೆಳಗಾವಿ

*ಕೋಳಿ ಫಾರ್ಮ್ ಹೆಸರಲ್ಲಿ ಡ್ರಗ್ಸ್ ಫ್ಯಾಕ್ಟರಿ! ಬೆಳಗಾವಿಯ ಇಬ್ಬರು ಸೇರಿ 7 ಮಂದಿ ಬಂಧನ; ಬೆಳಗಾವಿ ಪೊಲೀಸರಿಂದಲೂ ವಿಚಾರಣೆ ಸಾಧ್ಯತೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಹಜಗೋಳಿ ಗ್ರಾಮದಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಅಕ್ರಮವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಜಾಲವೊಂದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಇಬ್ಬರು ಸೇರಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ.

ಹಜಗೋಳಿ ಗ್ರಾಮದಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ತಯಾರಿಸಲಾಗುತ್ತಿದ್ದ ಎಂಡಿಎಂಎ ಮಾದರಿಯ ಮಾದಕ ವಸ್ತುಗಳನ್ನು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಆರೋಪಿಗಳು ಗೋವಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಜೋಪಡಿ ಮಾದರಿಯ ಕಟ್ಟಡಗಳು ಹಾಗೂ ಪ್ರವಾಸಿಗರಿಗಾಗಿ ನಿರ್ಮಿಸುವ ಶೆಡ್‌ಗಳಿಗೆ ಬಳಸುವ ಹುಲ್ಲು ಮಾರಾಟ ಮಾಡುವ ನೆಪದಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಗೋವಾದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಲಾಗುವ ಜೋಪಡಿ ಮಾದರಿಯ ಶೆಡ್‌ಗಳ ಮೇಲ್ಛಾವಣಿಗೆ ಬಳಸುವ ಹುಲ್ಲನ್ನು ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈ ಹುಲ್ಲು ಸಾಗಿಸುವ ನೆಪದಲ್ಲಿಯೇ ಆರೋಪಿಗಳು ವಿವಿಧ ರಾಜ್ಯಗಳಿಗೆ ತೆರಳಿ, ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಮಾದಕ ವಸ್ತು ವಿರೋಧಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ₹1.13 ಕೋಟಿ ಮೌಲ್ಯದ 208 ಗ್ರಾಂ ಡ್ರಗ್ಸ್‌, ವಿವಿಧ ರಾಸಾಯನಿಕ ವಸ್ತುಗಳು ಹಾಗೂ ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಹಜಗೋಳಿ ಗ್ರಾಮವು ಬೆಳಗಾವಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು, ಪ್ರಕರಣದಲ್ಲಿ ಬೆಳಗಾವಿ ತಾಲೂಕಿನ ಇಬ್ಬರು ಆರೋಪಿಗಳು ಬಂಧನವಾಗಿರುವುದು ಬೆಳಗಾವಿಯಲ್ಲೂ ಕುತೂಹಲ ಮೂಡಿಸಿದೆ.

ಬೆಳಗಾವಿ ಪೊಲೀಸರಿಂದಲೂ ವಿಚಾರಣೆ ಸಾಧ್ಯತೆ
ಬಂಧಿತರಾಗಿರುವ ಏಳು ಆರೋಪಿಗಳ ಪೈಕಿ ಇಬ್ಬರು ಬೆಳಗಾವಿ ತಾಲೂಕಿನವರು ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಕೂಡ ಪ್ರಕರಣದ ಕುರಿತು ಮಾಹಿತಿ ಪಡೆದು, ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಇವರು ಬೆಳಗಾವಿಯಲ್ಲಿ ಯಾರೊಂದಿಗೆ ಸಂಪರ್ಕ ಹೊಂದಿದ್ದರು, ಡ್ರಗ್ಸ್ ಜಾಲದೊಂದಿಗೆ ಬೆಳಗಾವಿಗೆ ಯಾವುದೇ ಸಂಪರ್ಕವಿತ್ತೇ ಹಾಗೂ ಮಾದಕ ವಸ್ತುಗಳ ಸಾಗಾಟ ಅಥವಾ ಸರಬರಾಜಿನಲ್ಲಿ ಸ್ಥಳೀಯವಾಗಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಅಂಶಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುವ ಸಾಧ್ಯತೆ ಇದೆ.

ಇನ್ನು ಬಂಧಿತರ ಪೈಕಿ ಬೆಳಗಾವಿಯಲ್ಲಿ ವಾಸವಾಗಿರುವ ಓರ್ವ ಆರೋಪಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ ನಿರ್ಮಿಸುತ್ತಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದ್ದು, ಆತನ ಆಸ್ತಿ ಹಾಗೂ ಹಣದ ಮೂಲದ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ.
ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರ ಪೊಲೀಸರು ತನಿಖೆ ಮುಂದುವರಿಸಿದ್ದು, ಡ್ರಗ್ಸ್ ತಯಾರಿಕೆ ಮತ್ತು ಸರಬರಾಜು ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿದ್ದಾರೆ.*****************************

Leave a Reply

Your email address will not be published. Required fields are marked *

Back to top button