*ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ*

*ಗೋಕಾಕ ಮತ್ತು ಮೂಡಲಗಿ ತಾಲೂಕು ಪಂಚಾಯಿತಿ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಆ.26 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಗೋಕಾಕ ಹಾಗೂ ಮೂಡಲಗಿ ತಾಲೂಕು ಪಂಚಾಯಿತಿಗಳಲ್ಲಿ ಬುಧವಾರ (ಆ.26) ರಂದು ಪ್ರತ್ಯೇಕವಾಗಿ ಆಯೋಜಿಸಲಾಯಿತು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ, ಸಮುದಾಯ ಶೌಚಾಲಯಗಳ ನಿರ್ವಹಣೆ ಮತ್ತು ತ್ಯಾಜ್ಯ ನೀರು ಹಾಗೂ ಮಲತ್ಯಾಜ್ಯ ನಿರ್ವಹಣೆ (FSM) ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಯಿತು.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಗ್ರಾಮ ಗ್ರಂಥಾಲಯಗಳ ಮೇಲ್ವಿಚಾರಕರ ನೇಮಕಾತಿ, ಗ್ರಂಥಪಾಲಕರ ವೇತನ ಪಾವತಿ ಹಾಗೂ ಗ್ರಂಥಾಲಯಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಮೊದಲ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಿಯಮಾನುಸಾರ ‘ಭಾರತ ಜೋಡೋ ಯುವ ಸಂಘ’ಗಳನ್ನು ರಚಿಸುವುದು, ಸಂಘದ ಕಚೇರಿ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶ ಗುರುತಿಸುವುದು ಹಾಗೂ ಮೆಂಟರ್ಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತಿಳಿಸಲಾಯಿತು.
ಪ್ರತಿಯೊಬ್ಬ ಸರ್ಕಾರಿ ನೌಕರರು ‘ಕರ್ತವ್ಯ’ ಮೊಬೈಲ್ ಆ್ಯಪ್ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಂಡು, ಪ್ರತಿದಿನ ಕಡ್ಡಾಯವಾಗಿ ಹಾಜರಾತಿಯನ್ನು ದಾಖಲಿಸಬೇಕೆಂದು ಕರ್ತವ್ಯ’ ಆ್ಯಪ್ ನ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಪ್ರಕರಣಗಳ ವಿಲೇವಾರಿ: ಮಾನ್ಯ ಲೋಕಾಯುಕ್ತ, ನ್ಯಾಯಾಲಯ ಹಾಗೂ ಡಿಸಿಆರ್ಇ (DCRE) ಸಂಬಂಧಿತ ಪ್ರಕರಣಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಯಿತು.
ಸಾರ್ವಜನಿಕರಿಂದ ಬಂದ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ, ತ್ವರಿತವಾಗಿ ಹಿಂಬರಹ ಅಥವಾ ಅನುಸರಣಾ ವರದಿ ಸಲ್ಲಿಸುವಂತೆ ಹಾಗೂ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆ ಹರಿಸುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಾಕೀತು ಮಾಡಲಾಯಿತು.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಮೇಲಿನ ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ), ಸಹಾಯಕ ನಿರ್ದೇಶಕರು (ಎಡಿ), ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಭಾಗವಹಿಸಿದ್ದರು.******************************











