ಪ್ರಕೃತಿ ಬೆಳಗಾವಿ

*ದುಪಧಾಳ ಸರ್ಕಾರಿ ಶಾಲೆಯಲ್ಲಿ ‘ಅಕ್ಕ ಪಡೆ’ಯಿಂದ ಹೆಣ್ಣು ಮಕ್ಕಳಿಗೆ ಜಾಗೃತಿ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ತಾಲೂಕಿನ ದುಪಧಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಅಕ್ಕ ಪಡೆ’ಯ ಪೊಲೀಸ್ ಅಧಿಕಾರಿಗಳು ಶಾಲೆಯ ಹೆಣ್ಣು ಮಕ್ಕಳಿಗೆ ವಿವಿಧ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಹಾಗೂ ಮಾಹಿತಿ ನೀಡಿದರು.

ಹೆಣ್ಣು ಮಕ್ಕಳು ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿರುವುದು, ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ಎದುರಾದರೆ ಅದನ್ನು ಮುಚ್ಚಿಡದೆ ಪೋಷಕರು, ಶಿಕ್ಷಕರು ಅಥವಾ ಪೊಲೀಸರ ಗಮನಕ್ಕೆ ತರುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ತಿಳುವಳಿಕೆ ನೀಡಲಾಯಿತು.

ಇದೇ ವೇಳೆ ಮಕ್ಕಳಿಗೆ ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸುವುದು, ಸುರಕ್ಷಿತವಾಗಿ ಸಂಚರಿಸುವುದು ಹಾಗೂ ತುರ್ತು ಸಂದರ್ಭದಲ್ಲಿ ಸಹಾಯ ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಪೊಲೀಸ್ ಅಧಿಕಾರಿಗಳು, ಮಕ್ಕಳು ಯಾವುದೇ ಭಯವಿಲ್ಲದೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು. ಶಾಲೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಅಕ್ಕ ಪಡೆ’ಯ ಈ ಕಾರ್ಯಕ್ರಮಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಮೆಚ್ಚುಗೆ ವ್ಯಕ್ತಪಡಿಸಿದರು.********************************

Leave a Reply

Your email address will not be published. Required fields are marked *

Back to top button