*ಕನ್ನಡದ ಗೊತ್ತುವಳಿ ಸ್ವೀಕಾರಕ್ಕೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಪ್ರತಿಭಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಆ.18 : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡದ ಗೊತ್ತುವಳಿಗಳನ್ನು ಸ್ವೀಕರಿಸುವಲ್ಲಿ ಪದೇಪದೇ ಹಿಂದೇಟು ಹಾಕಲಾಗುತ್ತಿದೆ ಎಂದು ಆರೋಪಿಸಿ ಕಿತ್ತೂರು ಕರ್ನಾಟಕ ಸೇನೆ ವತಿಯಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು ಹಾಗೂ ಆಡಳಿತ ಪಕ್ಷದಲ್ಲಿರುವ ಕನ್ನಡ ನಗರಸೇವಕರು ಕನ್ನಡದ ಗೊತ್ತುವಳಿಗಳನ್ನು ಸ್ವೀಕರಿಸಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕನ್ನಡಪರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಮಹಾಪೌರರು ಹಾಗೂ ಉಪ ಮಹಾಪೌರರು ಕರ್ನಾಟಕ ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಮತ್ತು ಸರ್ಕಾರಿ ವಾಹನಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕಿತ್ತೂರು ಕರ್ನಾಟಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕನ್ನಡದ ಗೊತ್ತುವಳಿಗಳನ್ನು ತಕ್ಷಣ ಸ್ವೀಕರಿಸಿ ಮಹಾನಗರ ಪಾಲಿಕೆಯಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಸಂಚಾಲಕ ದೇವೇಂದ್ರ ತಳವಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ರಾಮನಗಟ್ಟಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ದೊಡ್ಡಲಕ್ಕಪ್ಪಗೊಳ, ಸಿದ್ರಾಮ್ ಬಸ್ತವಡೆ, ಚಿಕ್ಕೋಡಿ ನಗರ ಘಟಕ ಅಧ್ಯಕ್ಷ ಕುಮಾರ, ಚಿಕ್ಕೋಡಿ ಅಧ್ಯಕ್ಷ ನಾಗೇಶ್ ಮಾಳಿ, ಬೆಳಗಾವಿ ಗ್ರಾಮೀಣ ಯುವ ಘಟಕ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಬೆಳಗಾವಿ ಪ್ರಧಾನ ಕಾರ್ಯದರ್ಶಿ ಯುವ ಘಟಕದ ಈರೇಶ್ ನಾಯಕ, ಮೂಡಲಗಿ ತಾಲೂಕು ಅಧ್ಯಕ್ಷ ಬಸವರಾಜ ಹುಲಕುಂದ, ಗೋಕಾಕ ತಾಲೂಕು ಯುವ ಘಟಕ ಉಪಾಧ್ಯಕ್ಷ ಶಿವಾನಂದ ಕರಡಿಗುಡ್ಡಿ, ಮೂಡಲಗಿ ತಾಲೂಕು ಯುವ ಘಟಕ ಕಾರ್ಯದರ್ಶಿ ಸಿಂಧೂರ ನಾಗಣ್ಣವರ, ಬೆಳಗಾವಿ ಜಿಲ್ಲಾ ಸಂಚಾಲಕ ಬಸವರಾಜ ಅವರೊಳ್ಳಿ, ಮುಸ್ಕಾನ್ — ಚಿಕ್ಕೋಡಿ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಹಾಗೂ ಅಂಬಿಕಾ ಚಲುವಾದಿ — ಹುಕ್ಕೇರಿ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕನ್ನಡದ ಬೇಡಿಕೆಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಕಿತ್ತೂರು ಕರ್ನಾಟಕ ಸೇನೆ ಎಚ್ಚರಿಕೆ ನೀಡಿತು.**************************************





