ಪ್ರಕೃತಿ ಬೆಳಗಾವಿ

*ನಾಗರ ಪಂಚಮಿಯಂದು ಹಾವು ಕಚ್ಚಿ ಮಹಿಳೆ ಸಾವು*

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಎಲ್ಲೆಡೆ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಹಾಲೆರೆಯುತ್ತಿದ್ದರೆ, ರಾಯಬಾಗ ಪಟ್ಟಣದ ಬಡ ಕುಟುಂಬವೊಂದರಲ್ಲಿ ಮಾತ್ರ ಹಬ್ಬದ ದಿನವೇ ಸಾವಿನ ಸೂತಕ ಆವರಿಸಿದೆ. ಹೊಲದಲ್ಲಿ ಕಸ ತೆಗೆಯುತ್ತಿದ್ದ ಮಹಿಳೆಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ರಾಯಬಾಗ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ರಾಯಬಾಗ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ನಿವಾಸಿ ಸತ್ಯವ್ವ ಶಿವಾನಂದ ಶಿಂಗೆ (43) ಎಂದು ಗುರುತಿಸಲಾಗಿದೆ.

ಕುಟುಂಬದ ಆರ್ಥಿಕ ಸಂಕಷ್ಟ ನೀಗಿಸಲು ದಿನನಿತ್ಯದಂತೆ ಸತ್ಯವ್ವ ಅವರು ಸೋಮವಾರ ಹೊಲದಲ್ಲಿ ಕಸ ತೆಗೆಯುವ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಹೊಲದಲ್ಲಿ ಅಡಗಿದ್ದ ವಿಷಕಾರಿ ಕೊಳಕು ಮಂಡಲ ಹಾವು ಏಕಾಏಕಿ ಸತ್ಯವ್ವ ಅವರಿಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣ ತೀವ್ರ ಅಸ್ವಸ್ಥಗೊಂಡ ಸತ್ಯವ್ವ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಕುಟುಂಬಕ್ಕೆ ಆಧಾರವಾಗಿದ್ದ ಸತ್ಯವ್ವ ಅವರ ಸಾವಿನಿಂದ ಮಕ್ಕಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನಾಗರ ಪಂಚಮಿ ಹಬ್ಬದ ದಿನವೇ ಸಂಭವಿಸಿದ ಈ ದುರಂತದಿಂದ ಶೋಕದ ವಾತಾವರಣ ನಿರ್ಮಾಣವಾಗಿದೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.************************************

Leave a Reply

Your email address will not be published. Required fields are marked *

Back to top button