*ಸರಸ್ವತಿ ನಗರದಲ್ಲಿ ₹25 ಲಕ್ಷ ವೆಚ್ಚದ ಕಾಂಕ್ರೀಟ್ ಚರಂಡಿ ಹಾಗೂ ಫೇವರ್ಸ್ ಕಾಮಗಾರಿಗೆ ಚಾಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರಸ್ವತಿ ನಗರದ ಶಿವನೇರಿ ಕಾಲೋನಿಯ 4ನೇ ಅಡ್ಡ ರಸ್ತೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆತಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ₹25 ಲಕ್ಷ ಅನುದಾನದಡಿ ಕೈಗೆತ್ತಿಕೊಳ್ಳಲಾದ ಕಾಂಕ್ರೀಟ್ ಚರಂಡಿ ಹಾಗೂ ಫೇವರ್ಸ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ರಸ್ತೆಯ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ಸಂಚಾರ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಅನುಕೂಲವಾಗಲಿದೆ.
ಶಿವನೇರಿ ಕಾಲೋನಿಯ 4ನೇ ಅಡ್ಡ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ರಸ್ತೆ ಬದಿಯಲ್ಲಿ ಫೇವರ್ಸ್ ಅಳವಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ರಸ್ತೆಯ ಪರಿಸರವೂ ಸುಧಾರಿಸಲಿದೆ.
ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿದ್ದಾರೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರ ಅಗತ್ಯ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿ, ತಮ್ಮ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೋಹನ ಸಾಂಬ್ರೇಕರ್, ಜೈನೂದ್ದಿನ ಮುಜಾವರ್, ಗಣಪತಿ ದೇಸಾಯಿ, ಗುರವ್, ಬೆಲ್ಲದ್ ಸರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.********************************






