*ಯಲ್ಲಮ್ಮ ಗುಡ್ಡದಲ್ಲಿ ಮೇದಾರ ಜನಾಂಗಕ್ಕೆ 50 ಮಳಿಗೆ ನೀಡಲು ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಆ.17 : ಸವದತ್ತಿ ಯಲ್ಲಮ್ಮ ದೇವಿ ಗುಡ್ಡದಲ್ಲಿ ಬಿದಿರಿನ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮೇದಾರ ಜನಾಂಗದವರಿಗೆ ಪ್ರತ್ಯೇಕವಾಗಿ 50 ವಾಣಿಜ್ಯ ಮಳಿಗೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮೇದ ಗಿರಿಜನ ಕಲ್ಯಾಣ ಸೇವಾ ಸಂಘದ ರಾಜ್ಯಾಧ್ಯಕ್ಷ ಕಡೇಮನೆ ಎಸ್. ರವಿಕುಮಾರ್ ನೇತೃತ್ವದಲ್ಲಿ ಆ.15, 2026ರಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸವದತ್ತಿ ಯಲ್ಲಮ್ಮ ದೇವಿಯ ಕ್ಷೇತ್ರದಲ್ಲಿ ಮೇದಾರ ಸಮುದಾಯವು ಹಲವು ವರ್ಷಗಳಿಂದ ಬಿದಿರಿನಿಂದ ತಯಾರಿಸುವ ಹಡಲಗಿ, ಬುಟ್ಟಿ ಸೇರಿದಂತೆ ದೇವಿಯ ಪೂಜೆಗೆ ಅಗತ್ಯವಿರುವ ವಿವಿಧ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಬಂದಿದೆ. ಜಾತ್ರೆಯ ಸಂದರ್ಭದಲ್ಲಿ ಸುಮಾರು ಆರು ತಿಂಗಳ ಕಾಲ ಇಲ್ಲಿ ವ್ಯಾಪಾರ ನಡೆಸುವ ಮೇದಾರ ಸಮುದಾಯದ ಈ ಸಾಂಪ್ರದಾಯಿಕ ಕುಲಕಸುಬು, ಅವರ ಜೀವನೋಪಾಯದ ಪ್ರಮುಖ ಆಧಾರವಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಈ ಪ್ರದೇಶವು ಈಗಾಗಲೇ ‘ಮೇದಾರ ಬೀದಿ’ ಎಂದು ಗುರುತಿಸಿಕೊಂಡಿದ್ದು, ಯಲ್ಲಮ್ಮ ದೇವಿಯ ಭಕ್ತರು ಪೂಜೆಗೆ ಬಳಸುವ ಬುಟ್ಟಿ, ಹಡಲಗಿ ಸೇರಿದಂತೆ ವಿವಿಧ ಬಿದಿರಿನ ವಸ್ತುಗಳಿಗೆ ಇಲ್ಲಿ ಬೇಡಿಕೆ ಇದೆ. ಭಕ್ತರು ಬಿದಿರಿನ ಬುಟ್ಟಿಗಳಲ್ಲಿ ನೈವೇದ್ಯ, ಫಲ-ಪುಷ್ಪಗಳನ್ನು ದೇವಿಯ ಸನ್ನಿಧಿಗೆ ಕೊಂಡೊಯ್ಯುತ್ತಾರೆ. ಹೀಗಾಗಿ ಯಲ್ಲಮ್ಮ ದೇವಿಯ ಕ್ಷೇತ್ರದೊಂದಿಗೆ ಮೇದಾರ ಸಮುದಾಯದ ಪರಂಪರೆ ಹಾಗೂ ಬದುಕಿನ ನಂಟು ಇದೆ ಎಂದು ಮುಖಂಡರು ಹೇಳಿದ್ದಾರೆ.
ಪ್ರಸ್ತುತ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಮೇದಾರರು ರಸ್ತೆ ಬದಿಯಲ್ಲಿ ಬಿದಿರಿನ ವಸ್ತುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಸಮಸ್ಯೆಗಳೂ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನವೀಕರಣಗೊಳ್ಳುತ್ತಿರುವ ಯಲ್ಲಮ್ಮ ಗುಡ್ಡದಲ್ಲಿ ಮೇದಾರ ಸಮುದಾಯಕ್ಕೆ 50 ಮಳಿಗೆಗಳನ್ನು ಮೀಸಲಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಳಿಗೆಗಳನ್ನು ಒದಗಿಸಿದರೆ ಬೆಳಗಾವಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಮೇದಾರ ಕುಟುಂಬಗಳಿಗೆ ತಮ್ಮ ಸಾಂಪ್ರದಾಯಿಕ ಬಿದಿರಿನ ಕರಕುಶಲ ಉದ್ಯಮವನ್ನು ಮುಂದುವರಿಸಿಕೊಂಡು ಗೌರವಯುತವಾಗಿ ಜೀವನ ನಡೆಸಲು ಅನುಕೂಲವಾಗಲಿದೆ. ಬಡ ಮೇದಾರ ಕುಟುಂಬಗಳ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ಯಲ್ಲಮ್ಮ ದೇವಿ ಪ್ರಾಧಿಕಾರವು ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಸಂಘ ಮನವಿ ಮಾಡಿದೆ.
ಈ ಕುರಿತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶಾಸಕ ವಿಶ್ವಾಸ ವೈದ್ಯ ಅವರಿಗೂ ಮನವಿ ರವಾನಿಸಲಾಗಿದೆ.
ಆ.15ರಂದು ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಮೇದ ಗಿರಿಜನ ಕಲ್ಯಾಣ ಸೇವಾ ಸಂಘದ ರಾಜ್ಯಾಧ್ಯಕ್ಷ ಕಡೇಮನೆ ಎಸ್. ರವಿಕುಮಾರ್, ಫಕೀರಪ್ಪ ಮುರುಗೋಡು ಕಿತ್ತೂರು, ರಾಜ್ಯ ಕಾರ್ಯಾಧ್ಯಕ್ಷ ಅರವಿಂದ ಶಿರಹಟ್ಟಿ, ಅರ್ಜುನ್ ಕಾಡೋಲಿ, ಅಪ್ಪಯ್ಯ ಬರೋಡ, ನಾಗೇಶ್ ಮೇದಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
“ಬಿದಿರಿನ ಗುಡಿ ಕೈಗಾರಿಕೆಯ ಸಾಮಗ್ರಿಗಳನ್ನು ಬಳಸಿ ಪರಿಸರ ಉಳಿಸಿ” ಎಂಬ ಸಂದೇಶದೊಂದಿಗೆ ಮೇದಾರ ಸಮುದಾಯದ ಸಾಂಪ್ರದಾಯಿಕ ಕುಲಕಸುಬಿಗೆ ಸರ್ಕಾರ ಹಾಗೂ ಯಲ್ಲಮ್ಮ ದೇವಿ ಪ್ರಾಧಿಕಾರ ಬೆಂಬಲ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.*******************************






