ಪ್ರಕೃತಿ ಬೆಳಗಾವಿ

*ನಕಲಿ ಚಿನ್ನ ನೀಡಿ ವಂಚನೆ: ಅಂತರ-ಜಿಲ್ಲಾ ವಂಚಕರ ಬಂದಿಸಿದ ರಾಯಬಾಗ ಪೊಲೀಸರು*

ಪ್ರಕೃತಿ ಬೆಳಗಾವಿ ಸುದ್ದಿ : ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಕಲಿ ಚಿನ್ನದ ಆಭರಣಗಳನ್ನು ನೀಡಿ, ಅವರಿಂದ ಅಸಲಿ ಬಂಗಾರದ ಸರಗಳನ್ನು ದೋಚುತಿದ ಅಂತರ-ಜಿಲ್ಲಾ ವಂಚಕರ ಜಾಲವನ್ನು ರಾಯಬಾಗ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 15, 2026 ರಂದು ರಾಯಬಾಗದ ಮುಧೋಳ ಆಸ್ಪತ್ರೆ ರಸ್ತೆಯಲ್ಲಿ ವಯಸ್ಸಾದ ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಸರವನ್ನು ನೀಡಿ ಆಮಿಷ ಒಡ್ಡಿದ ವಂಚಕರು, ಅವರ ಕೊರಳಲ್ಲಿದ್ದ ಅಸಲಿ ಬೋರಮಾಳ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ತೆ ಶ್ರೀಮತಿ ಮಹಾದೇವಿ ಅವರು ರಾಯಬಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಪೊಲೀಸರು ಅಪರಾಧ ಸಂಖ್ಯೆ 258/2026 ದಾಖಲಿಸಿಕೊಂಡು, ಬಿ.ಎನ್.ಎಸ್-2023 ಕಲಂ 318(4) ಸ/ಕ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ತನಿಖೆ ವೇಳೆ ತಾಂತ್ರಿಕ ಮಾಹಿತಿಯ ನೆರವಿನಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿಗಳಾದ ನಾಗಮ್ಮ ಕೋಂ ಗಿಡ್ಡಪ್ಪ (71) ಹಾಗೂ ಜೆ. ಪುಟ್ಟಪ್ಪ ತಂದೆ ಗಿಡ್ಡಪ್ಪ (39) ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ₹1,40,000 ಮೌಲ್ಯದ 10 ಗ್ರಾಂ ತೂಕದ ಅಸಲಿ ಬಂಗಾರದ ಬೋರಮಾಳ ಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ಬಿ. ಬಸರಗಿ ಹಾಗೂ ಅಥಣಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಶಾಂತ್ ಜಿ. ಮುನ್ನೋಳಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ರಾಯಬಾಗ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಂ. ಡಪ್ಟೇದಾರ, ಪಿ.ಎಸ್.ಐ ಶಿವಾನಂದ ಮುನ್ನಿಕೇರಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ್ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಂಚಕರನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಆಮಿಷಗಳಿಗೆ ಒಳಗಾಗದೆ ಎಚ್ಚರಿಕೆಯಿಂದಿರಲು ಪೊಲೀಸ್ ಇಲಾಖೆ ಮನವಿ ಮಾಡಿದೆ.**********************************

Leave a Reply

Your email address will not be published. Required fields are marked *

Back to top button