ಪ್ರಕೃತಿ ಬೆಳಗಾವಿ

*ಕರ್ನಾಟಕ ಪರ ಗೊತ್ತುವಳಿ ಅಂಗೀಕಾರವಾಗುವವರೆಗೆ ಬೆಳಗಾವಿ ಪಾಲಿಕೆಗೆ ₹250 ಕೋಟಿ ಅನುದಾನ ನೀಡಬೇಡಿ: ಕನ್ನಡ ಸಂಘಟನೆಗಳ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಮಹಾನಗರ ಪಾಲಿಕೆಗೆ ₹250 ಕೋಟಿ ವಿಶೇಷ ಅನುದಾನ ನೀಡುವ ಪ್ರಸ್ತಾವವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಗಡಿ ಭಾಗದ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಜುಲೈ 9ರಂದು ಬೆಳಗಾವಿಗೆ ಭೇಟಿ ನೀಡಿದ ವೇಳೆ ಮಹಾಪೌರರು ಹಾಗೂ ಉಪಮಹಾಪೌರರು ಮಹಾನಗರ ಪಾಲಿಕೆಗೆ ₹250 ಕೋಟಿ ವಿಶೇಷ ಅನುದಾನ ನೀಡುವಂತೆ ಮನವಿ ಸಲ್ಲಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಮನವಿಯಲ್ಲಿ, ಕಳೆದ ಮಾರ್ಚ್ 26ರಿಂದ 22ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ ಆಯೋಗದ ವರದಿಯೇ ಗಡಿ ವಿವಾದಕ್ಕೆ ಅಂತಿಮ” ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಅಂಗೀಕರಿಸುವಂತೆ ನಿರಂತರ ಹೋರಾಟ ನಡೆಸುತ್ತಿದ್ದರೂ, ಇದುವರೆಗೆ ಗೊತ್ತುವಳಿ ಅಂಗೀಕರಿಸಿಲ್ಲ ಎಂದು ಆರೋಪಿಸಲಾಗಿದೆ.
ಕರ್ನಾಟಕದ ಪರ ಸ್ಪಷ್ಟ ನಿಲುವು ಪ್ರಕಟಿಸದ ಮಹಾನಗರ ಪಾಲಿಕೆಗೆ ಯಾವುದೇ ವಿಶೇಷ ಅನುದಾನ ಬಿಡುಗಡೆ ಮಾಡಬಾರದು.

ಮೊದಲು ಕರ್ನಾಟಕ ಪರ ಗೊತ್ತುವಳಿಯನ್ನು ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಿದ ಬಳಿಕವೇ ಅನುದಾನ ನೀಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಒಂದು ವೇಳೆ ಗೊತ್ತುವಳಿ ಅಂಗೀಕಾರಕ್ಕೂ ಮುನ್ನವೇ ಅನುದಾನ ಬಿಡುಗಡೆ ಮಾಡಿದರೆ, ಗಡಿ ಭಾಗದ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಕನ್ನಡ ಸಂಘಟನೆಗಳ ನಿಯೋಗವು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮಂಡಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.*************************************

Leave a Reply

Your email address will not be published. Required fields are marked *

Back to top button