ಪ್ರಕೃತಿ ಬೆಳಗಾವಿ

ಬದಲಾದ ಬೆಳಗಾವಿ ರಾಜಕೀಯ ಸಮೀಕರಣ ; ಪಟ್ಟಣ & ಕೌಜಲಗಿ ಬೆನ್ನಿಗೆ ನಿಂತ ಸಾಹುಕಾರ್..!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಚಿವ ಸಂಪುಟ ವಿಸ್ತರಣೆ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿವೆ. ಈ ಮಧ್ಯೆ ಸಿಎಂ, ಡಿಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ತಂಡ ದೆಹಲಿಯಲ್ಲಿ ಬೀಡು ಬಿಟ್ಟಿದೆ.‌ ಈ ಮಧ್ಯೆ ಬೆಳಗಾವಿಯಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಮನೆಮಾಡಿದೆ.

ಹೌದು ಹಿರಿತನದ ಆಧಾರದ ಮೇಲೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಶಾಸಕ ಅಶೋಕ್ ಪಟ್ಟಣ ಹಾಗೂ ಮಹಾಂತೇಶ್ ಕೌಜಲಗಿ ಇದ್ದಾರೆ. ಇನ್ನೂ ‌ಮಹಿಳಾ‌ ಕೋಟಾದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಸಚಿವಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಈ ಮಧ್ಯೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರೂ ಪಕ್ಕಾ ಅವಕಾಶ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಇದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಅವರು ಇದ್ದು ಇನ್ನೊಂದು ಸಚಿವಸ್ಥಾನ ಸಿಗುವ ಸಾಧ್ಯತೆ ಇದೆ. ಆ ಒಂದು ಸ್ಥಾನಕ್ಕಾಗಿ ಈಗಾಗಲೇ ನಾಲ್ಕಾರು ಶಾಸಕರು ಹೈಕಮಾಂಡ್ ಮಟ್ಟದಲ್ಲಿ ಪೈಪೋಟಿ ನಡೆಸಿದ್ದಾರೆ.

ಸವದಿ ಹೊರಗಿಡಲು ಜಾರಕಿಹೊಳಿ ಕೌಂಟರ್ ಪ್ಲ್ಯಾನ್ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಅವರು ಡಿಕೆಶಿ ಸಂಪುಟದಲ್ಲಿ ಸಚಿವಸ್ಥಾನದ ನಿರೀಕ್ಷೆ ಹೊಂದಿದ್ದರೆ ಇತ್ತ ಸತೀಶ್ ಜಾರಕೊಹೊಳಿ ಪ್ರತ್ಯಂತ್ರ ಹೆಣೆದಿದ್ದಾರೆ. ಶತಾಯ – ಗತಾಯ ಲಕ್ಷ್ಮಣ ಸವದಿ ಅವರನ್ನು ಹೊರಗಿಡಲು ರಣತಂತ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ರಾಜಕಾರಣದಲ್ಲಿ ಒಂದೇ ಪವರ್ ಸೆಂಟರ್ ಇರಲಿ ಎಂಬುದು ಸಚಿವ ಸತೀಶ್ ಜಾರಕಿಹೊಳಿ ಚಿಂತನೆ. ಸವದಿ ಸಚಿವರಾದರೆ ಜಿಲ್ಲೆಯಲ್ಲಿ ಅವರ ಪ್ರಭಾವ ಹೆಚ್ಚಾಗುವ ಸಾಧ್ಯತೆ ಮನಗಂಡು ಬೇರೆಯವರಿಗೆ ಅವಕಾಶ ಕೊಡಿಸುವತ್ತ ಗಮನಹರಿಸಿದ್ದು ಇಬ್ಬರು ಹಿರಿಯ ಶಾಸಕರ ಬೆನ್ನಿಗೆ ನಿಂತಿದ್ದಾರೆ.

ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿರುವ ಸಚಿವ ಸತೀಶ್ ಜಾರಕಿಹೊಳಿ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಪರ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಸವದಿ ಅವರನ್ನು ಹೊರಗಿಟ್ಟಂತೆ ಆಗುತ್ತದೆ ಹಾಗೂ ಮೂಲ ಕಾಂಗ್ರೆಸ್ ನಾಯಕರ ಬೆನ್ನಿಗೆ ನಿಂತಂತಾಗುತ್ತದೆ ಎಂಬುದು ಸತೀಶ್ ಜಾರಕಿಹೊಳಿ ಲೆಕ್ಕಾಚಾರ.

ಒಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೂ ಲಕ್ಷ್ಮಣ ಸವದಿಗೆ ಜಾರಕಿಹೊಳಿ ಸಹೋದರರ ಕಾಟ ತಪ್ಪುತ್ತಿಲ್ಲ ಎಂಬಂತಾಗಿದೆ. ಇನ್ನೂ ಸವದಿ ಬೆನ್ನಿಗೆ ಸ್ವತಃ ಸಿಎಂ ಡಿ.ಕೆ ಶಿವಕುಮಾರ್ ನಿಂತಿದ್ದು ಯಾರ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.********************************

Leave a Reply

Your email address will not be published. Required fields are marked *

Back to top button