*ಬಸ್ ಕಿಟಕಿಯಿಂದ ಉಗುಳಲು ತಲೆ ಹೊರಹಾಕಿದ ವೇಳೆ ಭೀಕರ ದುರಂತ ಲಾರಿಗೆ ತಗುಲಿ ಐಟಿಐ ವಿದ್ಯಾರ್ಥಿ ಸಾವು*

ಪ್ರಕೃತಿ ಬೆಳಗಾವಿ ಸುದ್ದಿ : ಹುಬ್ಬಳ್ಳಿ, ಜು. 2 : ಚಲಿಸುತ್ತಿದ್ದ ಸಾರಿಗೆ ಬಸ್ ಕಿಟಕಿಯಿಂದ ಉಗುಳಲು ತಲೆ ಹೊರಹಾಕಿದ ವೇಳೆ ಪಕ್ಕದಿಂದ ತೆರಳುತ್ತಿದ್ದ ಲಾರಿಗೆ ತಗುಲಿ 17 ವರ್ಷದ ಐಟಿಐ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ಎಂದು ಗುರುತಿಸಲಾಗಿದ್ದು, ಆತ ಶಿರೂರ ಗ್ರಾಮದ ನಿವಾಸಿ ಹಾಗೂ ಐಟಿಐ ವಿದ್ಯಾರ್ಥಿಯಾಗಿದ್ದ.
ಬುಧವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆಎ-26 ಎಫ್-1039 ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂ-ಸ್ಯಾಂಡ್ ಸಾಗಿಸುತ್ತಿದ್ದ ಕೆಎ-04 ಎಡಿ-7218 ಸಂಖ್ಯೆಯ ಲಾರಿಯು ಬಸ್ ಅನ್ನು ಓವರ್‌ಟೇಕ್ ಮಾಡುತ್ತಿದ್ದ ಸಂದರ್ಭದಲ್ಲಿ ಫಕ್ಕೀರೇಶ ಬಸ್‌ನ ಕಿಟಕಿಯಿಂದ ತಲೆ ಹೊರಹಾಕಿ ಉಗುಳಲು ಮುಂದಾಗಿದ್ದಾನೆ. ಇದೇ ವೇಳೆ ಲಾರಿಗೆ ತಗುಲಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಚಾರ ಸುಗಮಗೊಳಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.*****************************






