*ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಜಾಗೃತಿ ಜಾಥಾ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ (ಜೂನ್ 29) : ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಜಾಗೃತಿಗಾಗಿ ನಗರದಲ್ಲಿ ಸೋಮವಾರ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಜರುಗಿತು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ರವಿ ಬಂಗಾರೆಪ್ಪನವರ್ ಜಾಥಾಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚನ್ನಮ್ಮ ವೃತ್ತ, ಕ್ಲಬ್ ರಸ್ತೆಯ ಮಾರ್ಗವಾಗಿ ಜಾಥಾ ಸಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯಗೊಂಡಿತು.
ಜಾಥಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕರಾದ ಶ್ರೀಮತಿ ಲೀಲಾವತಿ ಹಿರೇಮಠ, ಜಿಲ್ಲಾ ಪಿಯು ಕಾಲೇಜಿನ ನೋಡಲ್ ಅಧಿಕಾರಿ ಎಮ್.ಎ.ಮುಲ್ಲಾ, ಜಿಲ್ಲಾ ಶಾಲಾ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕ ಎಮ್.ಎಮ್. ಮದನಬಾವಿ, ಉಪನ್ಯಾಸಕಿ ಎಮ್.ಎಲ್.ಕೊರಬು ಸೇರಿ ಸರ್ದಾರ್ಸ್ ಪಿಯು ಕಾಲೇಜ್, ಬೆನನ್ ಸ್ಮಿತ್ ಶಿಕ್ಷಣ ತರಬೇತಿ ಕೇಂದ್ರ, ಸಂಗೊಳ್ಳಿ ರಾಯಣ್ಣ ಬಿ.ಎಡ್. ಕಾಲೇಜ್, ಮಣ್ಣೂರ ಬಿ.ಎಡ್. ತರಬೇತಿ ಕೇಂದ್ರದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.******************************





