*ಕಂದಾಯ ಇಲಾಖೆ ಆಧುನೀಕರಣಕ್ಕೆ ವೇಗ ಎರಡು ವರ್ಷದಲ್ಲಿ ಬಾಕಿ ಕೆಲಸಗಳ ಪೂರ್ಣಗೊಳಿಸುವ ಗುರಿ ಡಾ. ಜಿ. ಪರಮೇಶ್ವರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕೆ ಅಧಿಕಾರಿಗಳಿಗೆ ಕರೆ; ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲಿ
ಕಂದಾಯ ಇಲಾಖೆಯಲ್ಲಿನ ದೀರ್ಘಕಾಲದ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿ, ಭೂ ದಾಖಲೆಗಳ ತಿದ್ದುಪಡಿ, ಪೌತಿ, ಆಕಾರ್, ಕಂದಾಯ ಗ್ರಾಮ ಘೋಷಣೆ ಸೇರಿದಂತೆ ಬಾಕಿ ಉಳಿದಿರುವ ಎಲ್ಲ ಪ್ರಮುಖ ಕೆಲಸಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಳಗಾವಿಯಲ್ಲಿ ಕಂದಾಯ ದಿನಾಚರಣೆ, ಪತ್ರಿಕಾ ದಿನಾಚರಣೆ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸರ್ಕಾರದ ಎಲ್ಲ ಇಲಾಖೆಗಳ “ತಾಯಿ ಇಲಾಖೆ”ಯಾಗಿದ್ದು, ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಅತ್ಯಂತ ಮಹತ್ವದ ಇಲಾಖೆಯಾಗಿದೆ ಎಂದು ಹೇಳಿದರು.
ಭೂ ದಾಖಲೆಗಳಲ್ಲಿನ ದೋಷಗಳು, ನಕ್ಷೆಗಳಲ್ಲಿನ ವ್ಯತ್ಯಾಸಗಳು ಹಾಗೂ ಜಮೀನು ವಿವಾದಗಳಿಂದ ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ.
ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಈ ಸಮಸ್ಯೆಗಳನ್ನು ನಿವಾರಿಸುವುದು ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಅಧಿಕಾರಿಗಳು ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸಮಯಪಾಲನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಗೊಲ್ಲರಹಟ್ಟಿ, ಬೋವಿಹಟ್ಟಿ ಸೇರಿದಂತೆ ಅನೇಕ ವಸತಿಗಳು ಇನ್ನೂ ಕಂದಾಯ ಗ್ರಾಮಗಳಾಗಿ ಘೋಷಣೆಯಾಗದಿರುವುದರಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಈ ಸಾಮಾಜಿಕ ಅನ್ಯಾಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪದೋನ್ನತಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಯಾವುದೇ ಪದೋನ್ನತಿ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗುತ್ತಿಗೆ ಆಧಾರಿತ ಸರ್ವೇಯರ್‌ಗಳ ಬೇಡಿಕೆಗಳನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ಅಧಿಕಾರಿಯ ಕೆಲಸಕ್ಕೆ ಉತ್ತರದಾಯಿತ್ವ ಇರಬೇಕು. ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕಡತಗಳು ಅನಗತ್ಯವಾಗಿ ಬಾಕಿ ಉಳಿಯುವುದು ಸರಿಯಲ್ಲ. ಸಾರ್ವಜನಿಕರ ಕೆಲಸಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಮೂಲಕ ಜನಸ್ನೇಹಿ ಆಡಳಿತ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು
ಪತ್ರಿಕಾ ದಿನಾಚರಣೆ ಅಂಗವಾಗಿ ಮಾತನಾಡಿದ ಡಾ. ಪರಮೇಶ್ವರ್, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ನಾಲ್ಕನೇ ಅಂಗವಾಗಿದ್ದು, ಸಮಾಜಕ್ಕೆ ಸತ್ಯವನ್ನು ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿವೆ.
ಯಾವುದೇ ಸುದ್ದಿ ಅಥವಾ ಲೇಖನ ಪ್ರಕಟಿಸುವ ಮುನ್ನ ಅದರ ಸಾಮಾಜಿಕ ಪರಿಣಾಮವನ್ನು ಪರಿಗಣಿಸಬೇಕು. ತಟಸ್ಥತೆ ಮತ್ತು ವೃತ್ತಿಪರ ಮೌಲ್ಯಗಳನ್ನು ಕಾಪಾಡಿಕೊಂಡು ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ವೈದ್ಯರಿಗೆ ಅಭಿನಂದನೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯ ಸಮುದಾಯಕ್ಕೆ ಶುಭಾಶಯ ಕೋರಿದ ಅವರು, ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಸೇವೆ ಅತ್ಯಂತ ಅಮೂಲ್ಯವಾಗಿದೆ ಎಂದು ಹೇಳಿದರು.
ಜಾನಕಿ ಅವರಿಂದ ಸ್ವಾಗತ ಇದಕ್ಕೂ ಮುನ್ನ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಸ್ವಾಗತ ಭಾಷಣ ಮಾಡಿ, ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸೇರಿದಂತೆ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು, ಫಲಾನುಭವಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಂದಾಯ ಇಲಾಖೆಯನ್ನು ತಾಂತ್ರಿಕವಾಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಜನಸೇವೆಗೆ ಆದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.***********************************






