ಪ್ರಕೃತಿ ಬೆಳಗಾವಿ

*ಬೆಳಗಾವಿ ಲಿವಿಂಗ್ ರಿಲೇಷನ್‌ಶಿಪ್‌ ಹಿನ್ನೆಲೆ ಯುವತಿಯ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು ಮೂವರು ಆರೋಪಿಗಳ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯನ್ನು ಹತ್ಯೆ ಮಾಡಿ, ಮಹಾರಾಷ್ಟ್ರದ ತಿಲಾರಿ ಘಾಟ್‌ನ ದಟ್ಟ ಕಾಡಿನಲ್ಲಿ ಶವವನ್ನು ಎಸೆದಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ 22 ವರ್ಷದ ಗಂಗವ್ವ ಹಂಚಿನಮನಿ ಹಾಗೂ ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ 33 ವರ್ಷದ ಬಸವರಾಜ್ ಕರ್ನಾವರ್ ಕೆಲಕಾಲದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ವೇಳೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದೇ ವಿಚಾರ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಬಸವರಾಜ್ ಕರ್ನಾವರ್ ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪನ ಸಹಾಯದಿಂದ ಗಂಗವ್ವಳನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಶವವನ್ನು ಕಾರಿನಲ್ಲಿ ಸಾಗಿಸಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ತಿಲಾರಿ ಘಾಟ್ ಪ್ರದೇಶದ ಪ್ರಪಾತಕ್ಕೆ ಎಸೆದು ಪರಾರಿಯಾಗಿದ್ದರು.

ಕಳೆದ ಮೇ 29ರಂದು ತಿಲಾರಿ ಘಾಟ್‌ನ ಕಾಡಿನಲ್ಲಿ ಗುರುತು ಸಿಗದ ಮಹಿಳೆಯೊಬ್ಬರ ಕೊಳೆತ ಸ್ಥಿತಿಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಚಂದಗಡ ಪೊಲೀಸರು ತನಿಖೆ ಆರಂಭಿಸಿದ್ದರು.

ಘಾಟ್ ರಸ್ತೆ ಹಾಗೂ ಟೋಲ್ ಪ್ಲಾಜಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಶಂಕಿತ ವಾಹನದ ಸುಳಿವು ದೊರೆತಿದ್ದು, ಅದರ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಮೃತಳು ಗಂಗವ್ವ ಹಂಚಿನಮನಿ ಎಂಬುದು ಹಾಗೂ ಹತ್ಯೆ ಪ್ರಕರಣದಲ್ಲಿ ಬಸವರಾಜ್ ಸೇರಿದಂತೆ ಮೂವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಚಂದಗಡ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಬಸವರಾಜ್ ಕರ್ನಾವರ್, ಆತನ ತಂದೆ ಯಲ್ಲಪ್ಪ ಮತ್ತು ಮಾವ ಲಗಮಪ್ಪರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.****************************

Back to top button