*ನೆಲ-ಜಲ-ಭಾಷೆ ವಿಚಾರಗಳ ಕುರಿತು ಜೂನ್ 17ರಂದು ಸಂವಾದ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಖ್ಯಾತ ನ್ಯಾಯವಾದಿ ಮೋಹನ ಕಾತರಕಿ ಬೆಳಗಾವಿಗೆ
ಸರ್ವೋನ್ನತ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಮೋಹನ ಕಾತರಕಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ಜೂನ್ 17ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಿಟ್ ಹೌಸ್‌ನಲ್ಲಿ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ನೆಲ, ಜಲ, ಭಾಷೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಸಂವಾದ ನಡೆಸಲಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಮೂಲದವರಾದ ಮೋಹನ ಕಾತರಕಿ ಅವರು ಮಹಾದಾಯಿ, ಕೃಷ್ಣಾ ಹಾಗೂ ಕಾವೇರಿ ಜಲವಿವಾದಗಳ ಪ್ರಕರಣಗಳಲ್ಲಿ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ ರಾಜ್ಯದ ಹಿತಾಸಕ್ತಿಯನ್ನು ಯಶಸ್ವಿಯಾಗಿ ಪ್ರತಿಪಾದಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸಂವಾದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಗಡಿ ಭಾಗದ ಸಮಸ್ಯೆಗಳು, ಕನ್ನಡ ಭಾಷೆಯ ಅಭಿವೃದ್ಧಿ, ನೀರಿನ ಹಕ್ಕುಗಳು ಹಾಗೂ ಬೆಳಗಾವಿಗೆ ಸಂಬಂಧಿಸಿದ ಸಮಕಾಲೀನ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಾರ್ಯಕ್ರಮಕ್ಕೆ ಪತ್ರಕರ್ತರನ್ನೂ ಆಹ್ವಾನಿಸಲಾಗಿದ್ದು, ಮಾಧ್ಯಮ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಕೋರಲಾಗಿದೆ.
ಕನ್ನಡ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಮಾಡಿದ್ದಾರೆ.***********************************






