ಪ್ರಕೃತಿ ಬೆಳಗಾವಿ

*ಯಮಕನಮರಡಿ ವೃದ್ಧನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಪೊಲೀಸರು*

ಪ್ರಕೃತಿ ಬೆಳಗಾವಿ ಸುದ್ದಿ : ಯಮಕನಮರಡಿ ಏಪ್ರಿಲ್ 28: ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಯಮಕನಮರಡಿ ಪೊಲೀಸ್ ಠಾಣೆಯ ಸಿಬ್ಬಂದಿ ಉತ್ತಮ ಉದಾಹರಣೆಯಾಗಿದ್ದಾರೆ. ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ 80 ವರ್ಷದ ಪುಂಡಲಿಕ ಎಂಬ ವೃದ್ಧನಿಗೆ ಹಲವು ವರ್ಷಗಳಿಂದ ನಿಂತುಹೋಗಿದ್ದ ಪಿಂಚಣಿಯನ್ನು ಮರುಾರಂಭಗೊಳಿಸಲು ಪೊಲೀಸರು ನೆರವಾದ ಘಟನೆ ಗಮನ ಸೆಳೆದಿದೆ.

ಪುಂಡಲಿಕ ಅವರು ಕುಟುಂಬದ ಸಂಕಷ್ಟಗಳಿಂದ ಏಕಾಂಗಿಯಾಗಿ ಬದುಕು ನಡೆಸುತ್ತಿದ್ದರು. ನಾಲ್ಕು ಮಕ್ಕಳಲ್ಲಿ ಒಬ್ಬ ಗಂಡು ಮಗನನ್ನು ಕಳೆದುಕೊಂಡಿದ್ದು, ಮೂವರು ಹೆಣ್ಣು ಮಕ್ಕಳು ಮದುವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ವೃದ್ಧಾಪ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅವರಿಗೆ ಸರ್ಕಾರದಿಂದ ದೊರೆಯಬೇಕಾದ ಪಿಂಚಣಿ ಹಲವು ವರ್ಷಗಳಿಂದ ಬಂದಿರಲಿಲ್ಲ.

ಈ ವಿಷಯ ತಿಳಿದ ಯಮಕನಮರಡಿ ಪೊಲೀಸ್ ಠಾಣೆಯ ಸಿಪಿಐ ಜಾವೇದ ಮುಷಾಪುರೆ ಅವರ ನೇತೃತ್ವದ ತಂಡ ತಕ್ಷಣ ಸ್ಪಂದಿಸಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ದಾಖಲೆಗಳನ್ನು ಸರಿಪಡಿಸಿ, ಪುಂಡಲಿಕ ಅವರಿಗೆ ಪಿಂಚಣಿ ಸಿಗುವಂತೆ ವ್ಯವಸ್ಥೆ ಮಾಡಿದರು.

ಪೊಲೀಸರ ಈ ಮಾನವೀಯ ನಡೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದು, “ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲ, ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಘಟನೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವನೆಗೆ ಸ್ಪೂರ್ತಿಯಾಗಿದೆ.*******************************

Back to top button