*ವಿರೋಧಿಗಳ 5 ಸಾವಿರ ಕೋಟಿ ರೂ. ಆರೋಪ ಬರಿ ಸ್ಟಂಟ್; ಚರ್ಚೆಗೆ ನಾನು ಸಿದ್ಧ ಆದರೆ ಮಳೆ ಕರ್ಣಿ ಮುಂದೆ ಬರಬೇಕು; ಸಂಜಯ್ ಪಾಟೀಲ್ ನೇರವಾಗಿ ಚರ್ಚೆಗೆ ಬರಲಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : “ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ನನ್ನ ವಿರುದ್ಧ ಆರೋಪ ಮಾಡಲು ಬೇರೆ ಯಾವುದೇ ವಿಷಯವಿಲ್ಲದ ಕಾರಣ ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ಸಂಜಯ್ ಪಾಟೀಲ್ ಅವರಿಗೆ ಧೈರ್ಯವಿದ್ದರೆ ೫ ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ,” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.
ತಾಲೂಕಿನ ಮಣ್ಣೂರು ಗ್ರಾಮದಲ್ಲಿ ‘ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್’ (BDCC) ವತಿಯಿಂದ ಮಂಜೂರಾದ 50 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
*ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಾರಾಮತಿ’ ಮಾದರಿಯಲ್ಲಿ ಅಭಿವೃದ್ಧಿಪಡಿಸುವೆ.*
ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ಬಾಳ್ಕರ್, “ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಇಡೀ ರಾಜ್ಯದಲ್ಲೇ ಮನೆಮಾತಾಗುವಂತೆ ಅಭಿವೃದ್ಧಿ ಪಡಿಸುವುದು ನನ್ನ ಗುರಿ. ಎಲ್ಲರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಈ ಕ್ಷೇತ್ರವನ್ನು ಮಹಾರಾಷ್ಟ್ರದ ‘ಬಾರಾಮತಿ’ ಮಾದರಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಬೆಳೆಸಲಾಗುವುದು,” ಎಂದರು.
ಮಣ್ಣೂರ್, ಅಂಬೇವಾಡಿ ಮತ್ತು ಗೋಜಗಾ ಗ್ರಾಮಗಳ ರೈತರಿಗಾಗಿ 50 ಲಕ್ಷ ರೂ. ಬಡ್ಡಿರಹಿತ ಸಾಲ ಮಂಜೂರಾಗಿದೆ. ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹಾಗೂ ಎನ್. ಎಸ್. ಚೌಗುಲೆ ಅವರ ಶ್ರಮವನ್ನು ಅಭಿನಂದಿಸಿದ ಅವರು, “ಮೂರು ಗ್ರಾಮಗಳಿಗೆ ಈ ಹಣ ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ 2 ಕೋಟಿ ರೂಪಾಯಿ ನಿಧಿಯ ಅಗತ್ಯವಿದ್ದು, ಅದನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು. ಈ ಮೂರೂ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹೊಸ ರಸ್ತೆ ಕಾಮಗಾರಿಯನ್ನು ಮುಂದಿನ ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲಾಗುವುದು,” ಎಂದು ಭರವಸೆ ನೀಡಿದರು.
*5 ಸಾವಿರ ಕೋಟಿ ರೂ. ಆರೋಪಕ್ಕೆ ಖಡಾಖಂಡಿತ ತಿರುಗೇಟು*
ಸಂಜಯ್ ಪಾಟೀಲ್ ಅವರ ಆರೋಪಗಳನ್ನು ತೀವ್ರವಾಗಿ ಖಂಡಿಸಿದ ಅವರು: “800 ಕೋಟಿ ರೂಪಾಯಿ ಅಕ್ರಮ ಎಸಗಿದ ಕಾರಣಕ್ಕೆ ವಿಜಯ್ ಮಲ್ಯ ದೇಶ ತೊರೆದು ಲಂಡನ್‌ಗೆ ಓಡಿಹೋದರು. ಹಾಗಿರುವಾಗ ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಮಾಡಲು ಹೇಗೆ ಸಾಧ್ಯ? 2017ರಲ್ಲಿ ನಾನು 10 ಕೋಟಿ ವೆಚ್ಚದಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದಾಗ, ಸಂಜಯ್ ಪಾಟೀಲ್ ಅವರೇ ನನ್ನ ವಿರುದ್ಧ ದೂರು ನೀಡಿ ಇನ್‌ಕಮ್ ಟ್ಯಾಕ್ಸ್ (IT) ದಾಳಿ ಮಾಡಿಸಿದ್ದರು. ಎರಡು ಬಾರಿ ಶಾಸಕರಾಗಿದ್ದರೂ ಅವರು ಜನರಿಗಾಗಿ ಏನನ್ನೂ ಮಾಡಲಿಲ್ಲ. ನಾನು ಶಾಸಕಿಯಾಗಿ ಮಾತ್ರವಲ್ಲ, ಈ ಭಾಗದ ಮಗಳಾಗಿ ಕೆಲಸ ಮಾಡುತ್ತಿದ್ದೇನೆ; ಇದನ್ನು ಸಹಿಸಿಕೊಳ್ಳಲಾಗದೆ ಐಟಿ ಅಥವಾ ಇಡಿ (ED) ದಾಳಿಯ ಬೆದರಿಕೆ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.”
*ಗೆಣಸು ಸಂಸ್ಕರಣಾ ಕಾರ್ಖಾನೆಗೆ ಜಾಗ ನೀಡಲು ಮನವಿ*
ಬೆಳಗಾವಿ ಗ್ರಾಮೀಣ ಭಾಗದಲ್ಲಿ ಗೆಣಸಿನ (ರತಾಳೆ) ಬೆಳೆ ಹೆಚ್ಚಾಗಿ ಬೆಳೆಯುವುದರಿಂದ, ರೈತರ ಹಿತದೃಷ್ಟಿಯಿಂದ ಗೆಣಸು ಸಂಸ್ಕರಣಾ ಕಾರ್ಖಾನೆ ಸ್ಥಾಪಿಸುವುದಾಗಿ ಪ್ರಕಟಿಸಿದರು. “ಈ ಕಾರ್ಖಾನೆಗೆ ಸುಮಾರು ೫ ಎಕರೆ ಜಾಗದ ಅಗತ್ಯವಿದೆ. ಬೆಳಗಾವಿ ಅಥವಾ ಅಂಬೇವಾಡಿ ಬಳಿ ಬಾಡಿಗೆಗೆ ಅಥವಾ ಖರೀದಿಗೆ ಸೂಕ್ತ ಜಾಗ ಸಿಕ್ಕರೆ, ನಾನೇ ಸ್ವಂತ ಹಣ ಹೂಡಿಕೆ ಮಾಡಲು ಸಿದ್ಧಳಿದ್ದೇನೆ.
ಈ ಕಾರ್ಖಾನೆಯಿಂದ ಗೆಣಸಿನ ಉಪಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಉತ್ತಮ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತದೆ ಎಂದರು.”
*’ಗೃಹಲಕ್ಷ್ಮಿ’ ಮತ್ತು ಮಹಾರಾಷ್ಟ್ರದ ‘ಲಾಡ್ಕಿ ಬಹಿನ್’ ಯೋಜನೆ ಪ್ರಸ್ತಾಪ*
ಗೃಹಲಕ್ಷ್ಮಿ ಯೋಜನೆ ಹಣದ ಕುರಿತು ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, “ಎರಡು ತಿಂಗಳು ಹಣ ಬಂದಿಲ್ಲ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 25 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಹಣ ತಲುಪಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗುವುದು ಸ್ವಲ್ಪ ತಡವಾಗಬಹುದು. ಇದುವರೆಗೆ ಪ್ರತಿಯೊಬ್ಬ ಮಹಿಳೆಗೆ ಸುಮಾರು 70 ಸಾವಿರ ರೂಪಾಯಿವರೆಗೆ ಅನುಕೂಲವಾಗಿದೆ.”
ಮಹಾರಾಷ್ಟ್ರದ ಉದಾಹರಣೆ ನೀಡಿದ ಅವರು, “ಕರ್ನಾಟಕ ಸರ್ಕಾರದ ವಿರುದ್ಧ ಬೆಟ್ಟು ಮಾಡುವ ಮುನ್ನ ವಿರೋಧ ಪಕ್ಷದವರು ಮಹಾರಾಷ್ಟ್ರದ ‘ಲಾಡ್ಕಿ ಬಹಿನ್’ ಯೋಜನೆಯ ಕಥೆ ಏನಾಗಿದೆ ಮತ್ತು ಅಲ್ಲಿ ಎಷ್ಟು ಕಂತುಗಳನ್ನು ನೀಡಿದ್ದಾರೆ ಎಂಬುದನ್ನು ಯೋಚಿಸಲಿ. ನಾವು ಕೆಲಸ ಮಾಡುವವಳು, ಆದರೆ ಇವರು ಮನೆಯಲ್ಲೇ ಕುಳಿತು ವಾಟ್ಸಾಪ್‌ನಲ್ಲಿ ಆರೋಪ ಮಾಡುವವರು,” ಎಂದು ತಿರುಗೇಟು ನೀಡಿದರು.************************************











