ಪ್ರಕೃತಿ ಬೆಳಗಾವಿ

*ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸಚಿವರ ಹೇಳಿಕೆ*

* *ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

* *ಲಗ್ಗೆರೆ ನಾರಾಯಣಸ್ವಾಮಿ ಅವರ ಸಾಮಾಜಿಕ ಕಾರ್ಯಕ್ಕೆ ಸಚಿವರ ಮೆಚ್ಚುಗೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನ ಲಗ್ಗೆರೆಯ ಬಸವೇಶ್ವರ ಭವನದಲ್ಲಿ ಕಾಂಗ್ರೆಸ್ ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ 208 ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮಹಿಳೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಷ್ಟರ ಮಟ್ಟಿಗೆ ಇಂದು ಬೆಳೆದಿದ್ದಾಳೆ ಎಂದರು.

ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಂಥ, ಉತ್ತಮ ಆರೋಗ್ಯದ ಮಗುವಿಗೆ ಜನ್ಮ ನೀಡಿ ಎಂದು ಹಾರೈಸಿದ ಸಚಿವರು, ನಮ್ಮ ಇಲಾಖೆ ಮೂಲಕ, ಮಹಿಳೆ ಗರ್ಭಿಣಿ ಆದ ಬಳಿಕ, ಹುಟ್ಟುವ ಮಗುವಿಗೆ 6 ವರ್ಷದವರೆಗೂ
ಸರ್ಕಾರವೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಗರ್ಭಿಣಿ ಹಾಗೂ ಮಗುವಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಹೇಳಿದರು.

* *ನಾರಾಯಣಸ್ವಾಮಿ ಕಾರ್ಯಕ್ಕೆ ಶ್ಲಾಘನೆ*

ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಬಡವರಿಗೆ, ಹಸಿದವರಿಗೆ ನಾರಾಯಣಸ್ವಾಮಿ ನೆರವಾಗುತ್ತಿದ್ದಾರೆ. ಅವರ ಕೆಲಸಗಳಿಂದ ನಾನು ಸ್ಫೂರ್ತಿ ಪಡೆದಿರುವೆ, ರಾಜಕೀಯಕ್ಕಾಗಿ ಇಂಥ ಕಾರ್ಯಕ್ರಮ ಮಾಡದೇ ಸಾಮಾಜಿಕ ಕಳಕಳಿಯಿಂದ ಇಂಥ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂಥ ಪುಣ್ಯದ ಕೆಲಸ ಮಾಡುತ್ತಿರುವ ನಾರಾಯಣಸ್ವಾಮಿ ಅವರ ಕುಟುಂಬಕ್ಕೆ ಒಳಿತಾಗಲಿ ಎಂದರು.

ನಾನು ಪ್ರತಿವರ್ಷ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುತ್ತಿರುವೆ, ಕಳೆದ 7 ವರ್ಷಗಳಿಂದ ಈ ಕೆಲಸ ಮಾಡುತ್ತಿರುವೆ ಎಂದರು.

ಈ ವೇಳೆ ಚಿತ್ರದುರ್ಗದ ಮಡಿವಾಳ ಮಾಚಿದೇವ ಗುರುಪೀಠದ ಜಗದ್ಗುರು ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಕಾಂಗ್ರೆಸ್ ಮುಖಂಡರಾದ ಕುಸುಮಾ ಹನುಮಂತರಾಯಪ್ಪ, ಲಗ್ಗೆರೆ ನಾರಾಯಣಸ್ವಾಮಿ, ಮಂಜುಳಾ ನಾರಾಯಣಸ್ವಾಮಿ, ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ, ಆಶಾ ಸುರೇಶ್, ರೂಪಾ‌ ಲಿಂಗೇಶ್, ಮಂಜುಳಾ ಮಂಜುನಾಥ್ ಬಾಬು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.******************************

Back to top button