*ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳ ಜಾಗೃತಿ ಅಭಿಯಾನಕ್ಕೆ ಮೆಚ್ಚುಗೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಮಾರ್ಚ್ 27 : ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿಯನ್ನು ತಡೆಗಟ್ಟುವ ಉದ್ದೇಶದಿಂದ ನಗರದ ವಿವಿಧ ಭಾಗಗಳಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಿದರು.
“ನಮ್ಮ ಊರು – ನಮ್ಮ ಹೊಣೆ” ಎಂಬ ಸಂದೇಶದೊಂದಿಗೆ ಆಶ್ರಯ ಕಾಲೋನಿ, ಇರಿಗೇಶನ್ ಕಾಲೋನಿ, ಡಿ-ಗ್ರೂಪ್ ಕಾಲೋನಿ ಹಾಗೂ ಕಾಲೇಜಿನ ಸುತ್ತಮುತ್ತ ಪ್ರದೇಶಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಿ, ಕಸದ ತೊಟ್ಟಿಗಳಲ್ಲಿ ಮಾತ್ರ ಕಸ ವಿಸರ್ಜನೆ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಿ, ಬಟ್ಟೆಯ ಚೀಲಗಳನ್ನು ಬಳಸುವಂತೆ ವಿದ್ಯಾರ್ಥಿಗಳು ಕರೆ ನೀಡಿದರು. ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವವನ್ನು ವಿವರಿಸಿ ಅರಿವು ಮೂಡಿಸಿದರು.
ಈ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಶಿವ ಬಸವ ಹೆಲ್ತ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ನೂರಾರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.*****************************






