ಪ್ರಕೃತಿ ಬೆಳಗಾವಿ

*ಕೇವಲ ನಮ್ಮ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು*

*ಅಂಗನವಾಡಿ ಕಾರ್ಯಕರ್ತೆಯರಿಗೆ ಅತಿಹೆಚ್ಚು ಸಂಭಾವನೆ ಕೊಡುವ ರಾಜ್ಯ ಕರ್ನಾಟಕ*

*ದರ್ಶನ್ ಪುಟ್ಟಣ್ಣಯ್ಯ ಪ್ರಶ್ನೆಗೆ ಸಚಿವರ ಉತ್ತರ*

ಪ್ರಕೃತಿ ಬೆಳಗಾವಿ ಸುದ್ದಿ : ವಿಧಾನಸಭೆ (ಬೆಂಗಳೂರು) : ಕೇವಲ ನಮ್ಮ ಕಡೆ (ರಾಜ್ಯ ಸರ್ಕಾರ) ಬೊಟ್ಟು ಮಾಡುತ್ತೀರಿ, ಕೇಂದ್ರ ಸರ್ಕಾರದವರೂ ಯೋಜನೆಗಳಿಗೆ ಹಣ ನೀಡಬೇಕಲ್ಲ, ಅವರು ಒಂದು ಹೆಜ್ಜೆ ಮುಂದೆ ಹೋದರೆ, ನಾವೂ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ವಿಪಕ್ಷ‌ ಸದಸ್ಯರಿಗೆ ತಿರುಗೇಟು ನೀಡಿದರು.

ಬಜೆಟ್ ಅಧಿವೇಶನದ ಬುಧವಾರ ಪ್ರಶ್ನೋತ್ತರ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಅಂಗನವಾಡಿ ಕಾರ್ಯಕರ್ತರ ವೇತನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತದೆ. ಹರಿಯಾಣ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಬಳಿಕ ಹೆಚ್ಚು ಗೌರವ ಧನ ಕೊಡಲಾಗುತ್ತಿದೆ ಎಂದರು.

ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ 2700 ರೂಪಾಯಿ ಗೌರವ ಧನವನ್ನು ಪಾವತಿಸಿದರೆ, ಉಳಿದ 9800 ರೂಪಾಯಿಯನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಕಳೆದ‌ ಏಪ್ರಿಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1000 ರೂಪಾಯಿ, ಸಹಾಯಕಿಯರಿಗೆ 750 ರೂಪಾಯಿ ಏರಿಕೆ ಮಾಡಲಾಯಿತು. ಅವರು ಮಾಡುತ್ತಿರುವ ಕೆಲಸಕ್ಕೆ ಇದು ಸಾಕಾಗುತ್ತಿಲ್ಲ, ಸಹಾಯಧನ ಏರಿಕೆ ಮಾಡಬೇಕು ಎಂದು ಮನವಿ ಬಂದಿದ್ದು, ಈ ಸಂಬಂಧ ‌ನಾವು ಈಗಾಗಲೇ ಹಣಕಾಸು‌ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಎಂದು ಸಚಿವರು‌ ಮಾಹಿತಿ ನೀಡಿದರು.

ಪ್ರಸಕ್ತ ವರ್ಷದಿಂದ 5,000 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪೌಷ್ಟಿಕ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ. ಬಿಎ.ಬಿಎಡ್ , ಎಂಎ, ಎಂಕಾಂ ಪದವಿ ಪಡೆದಿರುವ ಸುಮಾರು 17,000 ಅಂಗನವಾಡಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಸರ್ಕಾರಿ ಮಾಂಟೆಸ್ಸರಿಗಳಲ್ಲಿ ಗುಣಮಟ್ಟ ಕಾಯ್ದುಕೊಳುವುದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು.*********************************

Back to top button