ಪ್ರವಾದಿ ಮಹಮ್ಮದ ಪೈಗಂಬರರನ್ನು ಅವಮಾನಿಸಿದ ರಾಮಗಿರಿ ಮಹಾರಾಜನ ಹೇಳಿಕೆ ಖಂಡಿಸಿ ಪ್ರತಿಭಟನೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಇಸ್ಲಾಂ ಧರ್ಮದ ಗುರುಗಳಾದ ಪ್ರವಾದಿ ಮಹಮ್ಮದ ಪೈಗಂಬರರವರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯದ, ನಾಸಿಕ್ ಜಿಲ್ಲೆಯ ಕಿನ್ನಾಳ ನಗರದಲ್ಲಿ ಪ್ರವಚನ ನೀಡುತ್ತಿದ್ದ ಒಬ್ಬ ಅವಿವೇಕಿ ಸ್ವಾಮಿ ರಾಮಗಿರಿ ಮಹಾರಾಜನ ಹೇಳಿಕೆಯನ್ನು ಖಂಡಿಸಿ ರಾಮದುರ್ಗ ಪಟ್ಟಣದಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದು ಪ್ರವಾದಿಯವರ ಬಗ್ಗೆ ಹಗುರವಾಗಿ ಮಾತನಾಡಿದ ದುಷ್ಟ ರಾಮಗಿರಿ ಮಹಾರಾಜನ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಾಮೀಯಾ ಮಸೀದಿಯ ಮೌಲಾನಾ ಜಹೂರಅಹ್ಮದ ಖಾಜಿರವರು ಮಾತನಾಡಿ ನಮ್ಮ ದೇಶದಲ್ಲಿ ಏನೂ ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಒಂದು ಧರ್ಮದವರು ಇನ್ನೊಂದು ಧರ್ಮಕ್ಕೆ ಅಪಮಾನ ಮಾಡುವ ರೀತಿ ಖಂಡನೀಯ. ಸರಕಾರಗಳು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಪ್ರವಾದಿಯವರ ಕುರಿತು ಹಗುರವಾಗಿ ಮಾತನಾಡಿದ ವ್ಯಕ್ತಿ ರಾಮಗಿರಿ ಮಹಾರಾಜನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಖಾರವಾಗಿ ನುಡಿದರು.
ಭಾರತ ದೇಶ ಬಹು ಭಾಷೆಗಳ, ಬಹು ಧರ್ಮಗಳ ಜ್ಯಾತಾತೀತ ದೇಶ. ಇಂತಹ ಜ್ಯಾತ್ಯಾತೀತ ದೇಶದಲ್ಲಿ ಮೂಲಭೂತವಾದಿಗಳು ಒಂದಾಗಿ ಬಾಳಲು ಬಿಡುತ್ತಿಲ್ಲ. ನಾವೆಲ್ಲರೂ ಒಂದೇ, ನಮ್ಮೆಲ್ಲರ ಧರ್ಮ ಮಾನವ ಧರ್ಮ ಎಂಬುದು ಮರೆತ ರಾಮಗಿರಿ ಮಹಾರಾಜರಂತಹ ಬುದ್ದಿಗೇಡಿ ಸ್ವಾಮಿಗಳು ಪ್ರವಾದಿಯಂತಹ ಮಹಾ ಪುರುಷರ ಬಗ್ಗೆ ಹಗುರವಾಗಿ ಮಾತನಾಡಿದ್ದು ಇಡೀ ದೇಶಕ್ಕೆ ಅವಮಾನ. ಕೂಡಲೇ ಇವರನ್ನು ಬಂಧಿಸಿ ಮಹಾರಾಷ್ಟ್ರದಲ್ಲಿ ಶಾಂತತೆ ಕಾಪಾಡಿಕೊಳ್ಳಲು ಸರಕಾರ ಮುಂದಾಗಬೇಕೆಂದು ರಾಮಗಿರಿ ಮಹಾರಾಜನ ಹೇಳಿಕೆ ಖಂಡಿಸಿ ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಒಂದು ಧರ್ಮದವರು ಇನ್ನೊಂದು ಧರ್ಮವನ್ನು ಪ್ರೀತಿಸಬೇಕೆಂದು ಹಾಗೂ ಎಲ್ಲರೂ ಕೂಡಿ ಬಾಳಬೇಕೆಂದು ಹೇಳುತ್ತದೆ. ಸಂವಿಧಾನದ ಪರಿಕಲ್ಪನೆಯಿಲ್ಲದೆ ಒಬ್ಬ ಅವಿವೇಕಿ ಸ್ವಾಮಿ ರಾಮಗಿರಿ ಮಹಾರಾಜ ಪ್ರವಾದಿಯವರ ಬಗ್ಗೆ ಮಾತನಾಡಿದ ಹೇಳಿಕೆ ಮಾನವಕುಲ ತಲೆತಗ್ಗಿಸುವಂತಾಗಿದೆ ಎಂದು ಜನಪರ ಟ್ರಸ್ಟ್‌ನ ಸುಭಾಷ ಘೋಡಕೆ, ಮಹಮ್ಮದಶಫಿ ಬೆಣ್ಣೆ, ಕಟ್ಟಡ ಕಾರ್ಮಿಕ ಮುಖಂಡ ನಾಗಪ್ಪ ಸಂಗೊಳ್ಳಿ ಮಾತನಾಡಿದರು. ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಶಬೀರಅಹ್ಮದ ಖಾಜಿ ಸ್ವಾಗತಿಸಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿಯ ಬಸೀರ್ ರೋಣ, ಇಮಾಮಹುಸೇನ್ ಬೆಣ್ಣೆ, ಪೈರೋಜ್ ಪಠಾಣ, ಮುತೋಜ ಪೆಂಡಾರಿ, ಡೊಂಗ್ರಿಸಾಬ ಕಡಫೆ,ಶಬ್ಬೀರ್,ಪಠಾಣ ಮಹೆಬೂಬ ಯಾದವಾಡ ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.**************************






