ಪ್ರೊ. ಸಿದ್ದು ಸಾವಳಸಂಗ ಅವರಿಗೆ ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ…!!
ಪ್ರಕೃತಿ ಬೆಳಗಾವಿ ಸುದ್ದಿ : ದಿನಾಂಕ 26, 27, 28 ಜುಲೈ 2024 ರಂದು ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಚೇತನ ಫೌಂಡೇಶನ್, ಧಾರವಾಡ ಇವರ ಸಹಯೋಗದಲ್ಲಿ ನಡೆದ “ಧಾರವಾಡ ನುಡಿ ಸಡಗರ” ಸಮಾರಂಭದ ಕೊನೆಯ ದಿನ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಕನಕ ಭವನದಲ್ಲಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ “ಬೇಂದ್ರೆ ನುಡಿಸಿರಿ – 2024” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರೊ. ಸಿದ್ದು ಸಾವಳಸಂಗ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದರಿಯವರು 27 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಿಂದ ಸಾಹಿತಿಯಾಗಿದ್ದಾರೆ.
ಅವರು ಕವನ, ಹನಿಗವನ, ಹೈಕು, ತನಗ, ತಂಕಾ, ಸಣ್ಣಕತೆ, ಮಕ್ಕಳ ಕವಿತೆ, ಮಕ್ಕಳ ಕತೆ, ಲೇಖನಗಳು, ಪುಸ್ತಕ ಅವಲೋಕನ, ವಿಮರ್ಶಾತ್ಮಕ ಬರಹ, ಅಂಕಣ ಬರಹ ಇತ್ಯಾದಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರು ಬರೆದ ಬರಹಗಳು ದಿನವೂ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿವೆ. ಹೃದಯ ಹೂವಿನ ಹಂದರ ಹನಿಗವನ ಸಂಕಲನ, ವಚನ ಸಂಜೀವಿನಿ ಆಧುನಿಕ ವಚನಗಳ ಸಂಕಲನ ಹಾಗೂ ಗೋಧೂಳಿ ಗಂಧ ಕವನ ಸಂಕಲನ ಹೀಗೆ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಹಾಗೂ ವಿವಿಧ ಹಿರಿಯ ಸಾಹಿತಿಗಳು, ಲೇಖಕರು, ಶಿಕ್ಷಣತಜ್ಞರ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರೊ. ಸಿದ್ದು ಸಾವಳಸಂಗ ಅವರು ಮಾಡಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸೇವೆಯನ್ನು ಪರಿಗಣಿಸಿ “ಬೇಂದ್ರೆ ನುಡಿಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರೊ. ಸಿದ್ದು ಸಾವಳಸಂಗ ಅವರಿಗೆ ಇಲ್ಲಿಯವರೆಗೆ 14 ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿದ್ದು, ಅವರ ಬಂಧುಗಳು, ಸ್ನೇಹಿತರು, ಕಾಲೇಜಿನ ಪ್ರಾಚಾರ್ಯರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಇನ್ನೂ ಸಾಹಿತ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲೆಂದು ಶುಭ ಹಾರೈಸಿದ್ದಾರೆ.*****************************






