ಪ್ರಕೃತಿ ಬೆಳಗಾವಿ

*ಹೆರಾಯಿನ್ ಮಾರುತ್ತಿದ್ದ ಆರೋಪಿ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದಲ್ಲಿ ನಿಷೇಧಿತ ಮಾದಕ ವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ಯುವಕನನ್ನು ಬಂಧಿಸಿದ್ದಾರೆ.

ಬಂಧಿತನಿಂದ ₹2.15 ಲಕ್ಷ ಮೌಲ್ಯದ 10.77 ಗ್ರಾಂ ಹೆರಾಯಿನ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹2,15,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನ ಗಲ್ಲಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 2ರಂದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ನಾಯಕ ನೇತೃತ್ವದ ತಂಡ ದಾಳಿ ನಡೆಸಿ, ಬಸವನ ಗಲ್ಲಿಯ ನಿವಾಸಿ ಸಂದೀಪ ವಿಜಯ ಅನಗೋಳಕರ (27) ಎಂಬಾತನನ್ನು ಬಂಧಿಸಿತು. ಆರೋಪಿಯಿಂದ 10.77 ಗ್ರಾಂ ತೂಕದ 122 ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿದ್ದ ಹೆರಾಯಿನ್ ಪುಡಿ ಹಾಗೂ ₹500 ಮೌಲ್ಯದ ನೋಕಿಯಾ ಕೀಪ್ಯಾಡ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಮುಂಬೈನ ಸಾಯನ್ ಕೋಳಿವಾಡ ಪ್ರದೇಶದ ‘ಅಮ್ಮ’ ಎಂಬ ಮಹಿಳೆಯಿಂದ ಹೆರಾಯಿನ್ ತಂದು ಮಾರಾಟ ಮಾಡುತ್ತಿದ್ದುದಾಗಿ ಆರೋಪಿತನು ತಿಳಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.*********************************

Leave a Reply

Your email address will not be published. Required fields are marked *

Back to top button