ತೀರ್ಥಕುಂಡೆ ಗ್ರಾಮಕ್ಕೆ 24 ಗಂಟೆ ವಿದ್ಯುತ್ ಪೂರೈಕೆಗೆ ಒತ್ತಾಯ: ಖಾನಾಪುರ KEB ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ!

ಪ್ರಕೃತಿ ಬೆಳಗಾವಿ ಸುದ್ದಿ : ಖಾನಾಪುರ : ತಾಲೂಕಿನ ತೀರ್ಥಕುಂಡೆ ಗ್ರಾಮ ಹಾಗೂ ಜಮೀನುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲದೆ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮಸ್ಥರ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ತೀರ್ಥಕುಂಡೆಯ ಜಮೀನುಗಳಲ್ಲಿ ವಾಸಿಸುವ ಕುಟುಂಬಗಳಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಮತ್ತು ಕೃಷಿಗೆ ಅಗತ್ಯವಿರುವ ನಿತ್ಯದ 7 ಗಂಟೆಗಳ ವಿದ್ಯುತ್ ಪೂರೈಕೆಯನ್ನು ತಕ್ಷಣವೇ ಪುನರಾರಂಭಿಸಬೇಕೆಂದು ಆಗ್ರಹಿಸಿ ಖಾನಾಪುರ ತಾಲೂಕಿನ AEE ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ 8 ದಿನಗಳಿಂದ ವಿದ್ಯುತ್ ಪೂರೈಕೆ ಸಂಪೂರ್ಣ ಬಂದ್ ಆಗಿದ್ದು, ಬೆಳೆದ ಬೆಳೆಗಳಿಗೆ ನೀರಿಲ್ಲದೆ ಒಣಗಿ ಹೋಗುತ್ತಿವೆ. ಅಲ್ಲದೆ, ಕುಡಿಯುವ ನೀರಿಲ್ಲದೆ ಗ್ರಾಮಸ್ಥರು, ರೈತರು ಹಾಗೂ ಜಾನುವಾರುಗಳು, ಕುರಿಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಜಮೀನುಗಳಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳು (TC) ಸುಟ್ಟು ಹೋಗಿದ್ದರೂ, ಹೊಸ TC ಅಳವಡಿಸಲು ಅಥವಾ ರಿಪೇರಿ ಮಾಡಲು ಲೈನ್‌ಮ್ಯಾನ್ (ಪವರ್ ಮ್ಯಾನ್) ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್. ಶೀಗಿಹಳ್ಳಿ ಮಾತನಾಡಿ, “ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ತೀರ್ಥಕುಂಡೆ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಖಾನಾಪುರ KEB ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಳು ಮುತ್ಯನಟ್ಟಿ, ಮಹಾದೇವ ಕೊಡತಿ, ಸಿದ್ರಾಮ್ ಜಾಂಬೋಟಿ, ರಾಮಲಿಂಗ್ ಮೊರೆ, ಲಗಮೋಜಿ ಗವನ್ನವರ, ಮಲ್ಲಿಕಾರ್ಜುನ ಗುಣ್ಣಗೋಳ, ಉದಯ ಪಾಟೀಲ, ಪ್ರಕಾಶ್ ಮಜಗವಿ, ನಂದು ಹೊನಗೆಕರ ಸೇರಿದಂತೆ ಗ್ರಾಮದ ಹಲವು ರೈತರು ಉಪಸ್ಥಿತರಿದ್ದರು.*******************************





