ಪ್ರಕೃತಿ ಬೆಳಗಾವಿ

*ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ರಕ್ತದಾನ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ*

*ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ: ವೀರೇಶ ದೊಡಮನಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು, ಒಂದು ಯೂನಿಟ್‌ ರಕ್ತದಾನದಿಂದ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ ಆರೋಗ್ಯವಂತ ನಾಗರಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದು ಉಪ ಪೊಲೀಸ್‌ ಅಧೀಕ್ಷಕ ವೀರೇಶ ದೊಡಮನಿ ಕರೆ ನೀಡಿದರು.

ನಗರದ ರಾಮತೀರ್ಥ ನಗರದ ಸಮಾಜ ಸೇವಕ ಸುರೇಶ ಯಾದವ ಅವರ ಜನ್ಮದಿನದ ಅಂಗವಾಗಿ ರಾಮತೀರ್ಥ ನಗರದ ನಿವಾಸಿಗಳು, ಸುರೇಶ ಯಾದವ ಫೌಂಡೇಶನ್ ಹಾಗೂ ಕೆಎಲ್‌ಇ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ರಕ್ತದಾನಿಗಳೇ ಜೀವ ಉಳಿಸುವ ಪ್ರಮುಖ ಆಧಾರವಾಗಿದ್ದಾರೆ. ಯುವಜನರು ಸೇರಿದಂತೆ ಅರ್ಹ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸಲು ಸಹಕರಿಸಬೇಕು ಎಂದರು.

ಸುರೇಶ ಯಾದವ ಫೌಂಡೇಶನ್ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರಿಗೆ ಸಹಾಯ-ಸಹಕಾರ ನೀಡುತ್ತಿದೆ. ಸುರೇಶ ಯಾದವ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಸಮಾಜದ ಬಗ್ಗೆ ಕಳಕಳಿ ಹೊಂದಿರುವ ವ್ಯಕ್ತಿಗಳೊಂದಿಗೆ ನಾವೆಲ್ಲರೂ ಕೈಜೋಡಿಸಿ, ಅವರ ಸಮಾಜ ಸೇವೆಗೆ ಮತ್ತಷ್ಟು ಬಲ ತುಂಬಬೇಕು ಎಂದು ವೀರೇಶ ದೊಡಮನಿ ಹೇಳಿದರು.

ಈ ಸಂದರ್ಭದಲ್ಲಿ ಸುರೇಶ ಯಾದವ ಅವರ ಜನ್ಮದಿನದ ಅಂಗವಾಗಿ ಗಣ್ಯರು ಅವರಿಗೆ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ರಕ್ತದಾನ ಮಾಡಿದರು. ಇದೇ ವೇಳೆ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕೆಎಂಡಿಸಿ ಮಾಜಿ ಅಧ್ಯಕ್ಷ ಮುಕ್ತಾರ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಮ್ ಎ.ಕೋರಿಶೆಟ್ಟಿ, ಎನ್.ಎಸ್. ಬಿರಾದಾರ, ಅಕ್ಷಯ್, ಅಭಿಷೇಕ್, ಬಸವರಾಜ ಯರಗಣಿ, ಚೆನ್ನಪ್ಪ ಬಿಡನಾಳ, ವೀರನಗೌಡ ಪಾಟೀಲ, ಬಾಳಪ್ಪ ಹಂಜಿ, ಮಹೇಶ್ ಶೀಗಿಹಳ್ಳಿ ಸೇರಿದಂತೆ ಕೆಎಲ್‌ಇ ಆಸ್ಪತ್ರೆಯ ಡಾ. ವಿಠ್ಠಲ್ ಮಾನೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.********************************

Leave a Reply

Your email address will not be published. Required fields are marked *

Back to top button