ಪ್ರಕೃತಿ ಬೆಳಗಾವಿ

*ಆವೇಶದ ನಿರ್ಧಾರಕ್ಕೆ ಮೂವರ ಬಲಿ ಐಫೋನ್ ಕಂತು ಕಟ್ಟಲು ಹಣ ಸಿಗಲಿಲ್ಲವೆಂದು ಬೆಟ್ಟದಿಂದ ಜಿಗಿದ ಮಗ ರಕ್ಷಿಸಲು ಹೋಗಿ ದಂಪತಿ ದಾರುಣ ಸಾವು*

ಪ್ರಕೃತಿ ಬೆಳಗಾವಿ ಸುದ್ದಿ : ಮಹಾರಾಷ್ಟ್ರ :  ಒಂದು ದುಬಾರಿ ಮೊಬೈಲ್ ಫೋನ್ ಮತ್ತು ಕ್ಷಣಿಕ ಆವೇಶ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಶೋಚನೀಯ ಘಟನೆಯೊಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಹೊಸ ಐಫೋನ್ ಮೊಬೈಲ್‌ಗಾಗಿ ಹೆತ್ತವರ ಜೊತೆ ಜಗಳವಾಡಿದ 19 ವರ್ಷದ ಯುವಕ ಬೆಟ್ಟದಿಂದ ಜಿಗಿದಿದ್ದು, ಆತನನ್ನು ಕಾಪಾಡಲು ಹೋದ ತಂದೆ ಮತ್ತು ಮಗ ಕಣ್ಣೆದುರೇ ಸಾವನ್ನಪ್ಪಿದ್ದನ್ನು ಕಂಡು ಕಂಗಾಲಾದ ತಾಯಿಯೂ ಜಿಗಿದು, ಒಂದೇ ಕುಟುಂಬದ ಮೂವರು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ.

ಛತ್ರಪತಿ ಸಂಭಾಜಿನಗರದ ಜಲ್ತಾ ಫಾಟಾ ನಿವಾಸಿಗಳಾದ ಮುರಳೀಧರ ಚಾಂದಗುಡೆ (48), ಅವರ ಪತ್ನಿ ಸಂಗೀತಾ ಹಾಗೂ ಮಗ ಕುನಾಲ್ (19) ಮೃತಪಟ್ಟ ದುರ್ದೈವಿಗಳು. ಇತ್ತೀಚೆಗಷ್ಟೇ ಹೊಸ ಐಫೋನ್ ಖರೀದಿಸಿದ್ದ ಕುನಾಲ್, ಅದರ ಈಎಂಐ (EMI) ಕಂತು ಪಾವತಿಸಲು ತಂದೆ ಬಳಿ ಹಣ ಕೇಳಿದ್ದ. ಆದರೆ ತಂದೆ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಕೌಟುಂಬಿಕ ಗಲಾಟೆ ನಡೆದಿತ್ತು. ಇದರಿಂದ ಕೋಪಗೊಂಡ ಕುನಾಲ್, ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಿಡದಿಯಂತಹ ತಿಸ್‌ಗಾಂವ್ ಪ್ರದೇಶದಲ್ಲಿರುವ ಖಾವ್ಡಾ ಬೆಟ್ಟದ ತುದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

ವಿಷಯ ತಿಳಿದ ತಕ್ಷಣ ಹೆತ್ತವರು, ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬರೋಬ್ಬರಿ ಮೂರು ಗಂಟೆಗಳ ಕಾಲ ಆತನಿಗೆ ಬುದ್ಧಿವಾದ ಹೇಳಿ ಕೆಳಗೆ ಇಳಿಸಲು ಸತತ ಪ್ರಯತ್ನ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸುರಕ್ಷತಾ ಬಲೆ ಕಟ್ಟಲು ಮುಂದಾದರೂ, ಕುನಾಲ್ ಪ್ರಪಾತದ ತುದಿಯಲ್ಲೇ ಓಡಾಡುತ್ತಿದ್ದ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಂದೆ ಮುರಳೀಧರ ಮಗನಿಗೆ ಹತ್ತಿರವಾಗಿ ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ, ಕುನಾಲ್ ಪ್ರಪಾತಕ್ಕೆ ಜಿಗಿದಿದ್ದಾನೆ.

ಆತನನ್ನು ರಕ್ಷಿಸಲು ಹೋದ ತಂದೆಯೂ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾರೆ. ಗಂಡ ಮತ್ತು ಮಗ ಕಣ್ಣೆದುರೇ ಪ್ರಪಾತಕ್ಕೆ ಬಿದ್ದು ಸಾವು ಈಡಾಗಿದ್ದನ್ನು ಕಂಡು ಆಘಾತಕ್ಕೊಳಗಾದ ತಾಯಿ ಸಂಗೀತಾ ಕೂಡ ಕ್ಷಣಾರ್ಧದಲ್ಲೇ ಬೆಟ್ಟದಿಂದ ಧುಮುಕಿದ್ದಾರೆ. ವಾಲುಜ್ ಎಂಐಡಿಸಿ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.****************************

Leave a Reply

Your email address will not be published. Required fields are marked *

Back to top button