*ವಿವಾಹಿತೆಯೊಂದಿಗೆ ಯುವಕ ಪರಾರಿ; ಮನೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕುಟುಂಬಸ್ಥರು ಕೂದಲೆಳೆ ಅಂತರದಲ್ಲಿ ಪಾರು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ವಿವಾಹಿತೆಯೊಂದಿಗೆ ಯುವಕ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ಆತನ ಮನೆ ಮೇಲೆ 12ಕ್ಕೂ ಹೆಚ್ಚು ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ನಾಯಕ ಎಂಬ ಯುವಕನ ಮನೆಗೆ ತಳವಾರ, ಜಂಬೆ, ಕುಡಗೋಲು ಹಾಗೂ ಬಡಿಗೆಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆಯ ಹಂಚುಗಳನ್ನು ಪುಡಿಗೈದು, ಅಲ್ಮಾರಿ, ಟಿವಿ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ದಾಳಿಯ ವೇಳೆ ಮನೆಯಲ್ಲಿದ್ದ ಯಲ್ಲಪ್ಪನ ಕುಟುಂಬಸ್ಥರ ಮೇಲೂ ಹಲ್ಲೆ ನಡೆಸಲು ಯತ್ನಿಸಲಾಗಿದ್ದು, ಅವರು ಸ್ಥಳದಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಯಲ್ಲಪ್ಪ ನಾಯಕ ಎಂಬ ಯುವಕ ಎರಡು ದಿನಗಳ ಹಿಂದೆ ನಾಗವ್ವ ಎಂಬ ವಿವಾಹಿತೆಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ವಿಚಾರಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ಯಲ್ಲಪ್ಪನ ಕುಟುಂಬವನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯಲ್ಲಪ್ಪನ ಕುಟುಂಬಸ್ಥರು ಪೊಲೀಸ್ ಕಮೀಷ್ನರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.****************************






