
ಬೆಳಗಾವಿ: ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಕನಿಷ್ಠ ವೇತನದ ₹26,000 ನಿಗದಿಗೆ ಉದ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ್ ನಾಗಮನತಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಉದ್ದಿಮೆ ಅಸೋಸಿಯೇಷನ್‌ಗಳ ಸದಸ್ಯರು ಸಮಾವೇಶಗೊಂಡು ಈಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದ್ದು, ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಪ್ರಭಾಕರ್ ನಾಗಮನತಳ, ಗುಜರಾತ್‌ನಲ್ಲಿ 2026ರವರೆಗೆ ಕನಿಷ್ಠ ವೇತನ ₹13,200 ಇದ್ದರೆ, ಕರ್ನಾಟಕದಲ್ಲಿ ಅದನ್ನು ₹26,000ಕ್ಕೆ ಏರಿಸಲು ಹೊರಟಿರುವುದು ಆಘಾತಕಾರಿ ಎಂದರು. ಇದು ರಾಜ್ಯದ ಉದ್ದಿಮೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಹೆಚ್ಚಿದ ಕನಿಷ್ಠ ವೇತನದಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಉತ್ಪನ್ನಗಳ ಬೆಲೆ ಹೆಚ್ಚಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಕಷ್ಟವಾಗುತ್ತದೆ. ಅಂತಿಮವಾಗಿ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಣ್ಣ ಕೈಗಾರಿಕೆಗಳು ಮುಚ್ಚಿದ ನಂತರ ದೊಡ್ಡ ಕೈಗಾರಿಕೆಗಳಿಗೂ ನಷ್ಟವಾಗುತ್ತದೆ. ಇಡೀ ಉದ್ಯಮ ವ್ಯವಸ್ಥೆಯೇ ಕುಸಿಯುವ ಭೀತಿಯಿದೆ. ಇದರಿಂದ ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಹೊರತು, ಉದ್ಯೋಗ ಸೃಷ್ಟಿ ಮಾಡುವ ಸರ್ಕಾರದ ಉದ್ದೇಶಕ್ಕೆ ಧಕ್ಕೆ ತರುತ್ತದೆ ಎಂದು ಪ್ರಭಾಕರ್ ಎಚ್ಚರಿಸಿದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೊಡುಗೆ ಅಪಾರವಾಗಿದೆ. ಇವು ಜಿಡಿಪಿ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಉದ್ದಿಮೆಗಳಿಗೆ ತೊಂದರೆಯಾದಾಗ ಸರ್ಕಾರ ತಕ್ಷಣ ಕಾಳಜಿ ವಹಿಸಿ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಮತ್ತು ವಿವಿಧ ಅಸೋಸಿಯೇಷನ್‌ಗಳ ಮುಖಾಂತರ ಈ ವಿರೋಧವನ್ನು ವ್ಯಕ್ತಪಡಿಸಲಾಗುತ್ತಿದೆ. ನೂತನವಾಗಿ ರಚನೆಯಾದ ಸರ್ಕಾರವು ಉದ್ಯಮಿಗಳ ಆಶಯ ಮತ್ತು ಸಮಸ್ಯೆಗಳನ್ನು ಆಲಿಸಬೇಕು ಎಂದು ಪ್ರಭಾಕರ್ ನಾಗಮನತಳ ಮನವಿ ಮಾಡಿದರು.
ಉದ್ಯೋಗದ ಸಮಸ್ಯೆ ಪರಿಹರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ನೀಡದಿದ್ದರೆ, ಉದ್ಯಮ ವಲಯವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ:











