*ಗಡಿ ವಿವಾದ: ಮಹಾಜನ ವರದಿ ಅಂತಿಮಗೊಳಿಸಿ – ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯಕ್ಕೆ ಕ.ರ.ವೇ ಯುವಸೇನೆ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಏ.6 : ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ರಾಜ್ಯಾಧ್ಯಕ್ಷ ಹರೀಶ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾ ಅಧ್ಯಕ್ಷ ಬಾಳಪ್ಪ ಬಿ. ಗುಡಗೇನಟ್ಟಿ ಅವರ ನೇತೃತ್ವದಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸದಸ್ಯರಿಗೆ ಮನವಿ ಸಲ್ಲಿಸಿ, ಗಡಿ ವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮವೆಂದು ಘೋಷಿಸುವ ಜೊತೆಗೆ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯವನ್ನು ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಅಂಗೀಕರಿಸುವಂತೆ ಆಗ್ರಹಿಸಲಾಗಿದೆ.
ಮನವಿಯಲ್ಲಿ, 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ಬಳಿಕ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿದಿದ್ದು, 1966ರಲ್ಲಿ ನೇಮಕವಾದ ಮೆಹರ್‌ಚಂದ್ರ ಮಹಾಜನ ಆಯೋಗವು 1967ರಲ್ಲಿ ತನ್ನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದೆ ಎಂದು ಸ್ಪಷ್ಟಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಆದರೂ ಮಹಾರಾಷ್ಟ್ರ ಪರ ಸಂಘಟನೆಗಳು ನಿರಂತರವಾಗಿ ಗಡಿ ವಿವಾದವನ್ನು ಕೆದಕುತ್ತಿರುವುದು ಗಮನಾರ್ಹ ಎಂದು ತಿಳಿಸಲಾಗಿದೆ.
ಇದಲ್ಲದೆ, 2005 ಅಕ್ಟೋಬರ್ 27ರಂದು ಬೆಳಗಾವಿ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ (ಸಂಖ್ಯೆ 457) ಬಹುಮತದಿಂದ ಅಂಗೀಕಾರಗೊಂಡಿದ್ದು, ಆ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪೂರಕ ದಾಖಲೆಗಳಾಗಿ ಬಳಸಿಕೊಂಡಿರುವುದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆದಲ್ಲಿ, ಪ್ರಸ್ತುತ ಪಾಲಿಕೆಯಲ್ಲಿ ಕರ್ನಾಟಕ ಪರ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ, ತಕ್ಷಣವೇ ವಿಶೇಷ ಸಭೆ ಕರೆಯಿಸಿ, ಮಹಾಜನ ವರದಿಯನ್ನೇ ಅಂತಿಮ ಎಂದು ಘೋಷಿಸುವ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ದೃಢ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಹಿತವನ್ನು ಬಲಪಡಿಸಬೇಕೆಂದು ಕ.ರ.ವೇ ಯುವಸೇನೆ ಆಗ್ರಹಿಸಿದೆ.
ಈ ಹೋರಾಟ ನ್ಯಾಯ ಸಿಗುವವರೆಗೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ, ಜಿಲ್ಲಾ ಕಾರ್ಯದರ್ಶಿ ನಿರುಪಾದ ಚಂಡಕಿ, ರವಿ ಕಾರಬಾರ, ಅಪ್ಪು ಲಮಾಣಿ, ಸೋಮೇಶ ಗುಡಗೇನಟ್ಟಿ ಹಾಗೂ ಭೀಮರಾಯಿ ಬಿ.ಜಿ ಉಪಸ್ಥಿತರಿದ್ದರು.******************************






