ಪ್ರಕೃತಿ ಬೆಳಗಾವಿ

*ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ನೇತ್ರದಾನ ಅರಿವು ಕಾರ್ಯಕ್ರಮ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬದ ಪ್ರಯುಕ್ತ ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿರುವ *ನೇತ್ರದರ್ಶನ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಯೂನಿಟ್ ಆಫ್ ಡಾ. ಅಗರವಾಲ್ಸ್ ಕಣ್ಣಿನ* ಆಸ್ಪತ್ರೆಯಲ್ಲಿ ನೇತ್ರದಾನ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ *ಆಕಾಶ್ ಹಲಗೇಕರ್, ಉದಯ್ ಕೋಲಕಾರ್,ವಿಷ್ಣು ಇಂಗಳಿ, ಲಕ್ಷ್ಮೀ ಇಂಗಳಿ, ಶ್ವೇತಾ ಕೋಟ್ಯಾನ್, ಗಜಾನನ ಮೇತ್ರಿ, ಭಾವಕನ್ನಾ ಪಿರಗಾನೆ* ಹಾಗೂ ಅವರ ಸ್ನೇಹಿತರು ಭಾಗವಹಿಸಿ *ರೋಟರಿ ನೇತ್ರದರ್ಶನ್ ಕಣ್ಣಿನ ಬ್ಯಾಂಕ್‌ಗೆ* ತಮ್ಮ ಕಣ್ಣುಗಳನ್ನು ದಾನ ಮಾಡುವದರ ಮೂಲಕ, ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.

ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.

ಪುನೀತ್ ರಾಜಕುಮಾರ್ ಅವರು ತಮ್ಮ ಜೀವನಕಾಲದಲ್ಲಿಯೇ ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಗೋಶಾಲೆಗಳಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಅವರು ತೀರಿಕೊಂಡ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ಕು ಅಂಧರಿಗೆ ಬೆಳಕಾಗಿ, ಮಾನವೀಯತೆ ಮತ್ತು ಸೇವೆಯ ಆದರ್ಶವನ್ನು ತೋರಿಸಿದರು.

ಅವರ ಈ ಪ್ರೇರಣೆಯಿಂದ ಅನೇಕರು ನೇತ್ರದಾನದ ಮಹತ್ವವನ್ನು ಅರಿತು, ಸಮಾಜ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ 51ನೇ ಜನ್ಮದಿನದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸುವ ಪ್ರಯತ್ನಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜಸೇವಕರು ಮತ್ತು ಯುವಕರು ನೇತ್ರದಾನ ಮಾನವೀಯತೆಯ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದ ಬಳಿಕವೂ ಇನ್ನೊಬ್ಬರ ಬದುಕಿಗೆ ಬೆಳಕು ನೀಡುವ ಸಂಕಲ್ಪವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ವೇಳೆ ಹಲವರು ನೇತ್ರದಾನ ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿ, ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.

ಸಮಾಜ ಸೇವಕರಾದ ಆಕಾಶ್ ಹಲಗೇಕರ್, ಉದಯ್ ಕೋಲಕಾರ್,ಭಾವಕನ್ನಾ ಪಿರಗಾನೆ, ವಿಶಾಲ್ ಇಂಗಳಿ, ಲಕ್ಷೀ ಇಂಗಳಿ, ಗಜಾನನ ಮೇತ್ರಿ, ಶ್ವೇತಾ ಕೋಟ್ಯಾನ್ ಹಾಗೂ ಅವರ ಸ್ನೇಹಿತರು ಮಾತನಾಡಿ, ಪುನೀತ್ ರಾಜಕುಮಾರ್ ಅವರ ಜೀವನವೇ ಸಮಾಜ ಸೇವೆಗೆ ಒಂದು ಪ್ರೇರಣೆಯಾಗಿದೆ ಎಂದು ಹೇಳಿದರು. ಅವರು ಬದುಕಿದ್ದಾಗ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ, ಆರೋಗ್ಯ ಮತ್ತು ಅನಾಥರ ಸಹಾಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಆ ದಯಾಮಯ ವ್ಯಕ್ತಿತ್ವ ಮತ್ತು ಮಾನವೀಯತೆ ಇಂದು ಸಾವಿರಾರು ಜನರಿಗೆ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೇತ್ರದಾನ ಕುರಿತು ಮಾತನಾಡಿದ *ಡಾ. ಸಚಿನ ಮಾಹುಲಿ, ಡಾ. ಅವಧೂತ ವಾಗ್ಲೆ, ಡಾ. ಅಲ್ಪೇಶ್ ಟೋಪರಾನಿ ಹಾಗೂ ವ್ಯವಸ್ಥಾಪಕರಾದ ಶ್ರೀ ಸೇತು ರಾಮಸ್ವಾಮಿ* ಅವರು ಮಾತನಾಡಿ ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಹಲವಾರು ದೃಷ್ಟಿಹೀನರಿಗೆ ಹೊಸ ಜೀವನ ನೀಡಬಹುದಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಇನ್ನೂ ನೇತ್ರದಾನದ ಬಗ್ಗೆ ಅರಿವು ಕಡಿಮೆ ಇರುವುದರಿಂದ ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳ ಅಗತ್ಯವಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಸಮಾಜ ಸೇವೆಯ ಪ್ರತಿಜ್ಞೆ ಕೈಗೊಳ್ಳಲಾಯಿತು. ಅವರ ಆದರ್ಶಗಳು ಮತ್ತು ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗೂ ದಾರಿದೀಪವಾಗಲಿ ಎಂಬ ಆಶಯವನ್ನು ಎಲ್ಲರೂ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ನೇತ್ರದಾನದ ಮಹತ್ವವನ್ನು ಜನರಿಗೆ ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಆಯೋಜಕರು ಹೇಳಿದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಮಾಜ ಸೇವಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.*******************************

Back to top button