*ಧಾರವಾಡ ಕೇಂದ್ರ ಕಾರಾಗೃಹಕ್ಕೆ ಮಹಾನಿರ್ದೇಶಕ ಅಲೋಕ ಕುಮಾರ ಅವರು ಭೇಟಿ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ : ನ.04: ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮುಖ್ಯಸ್ಥರಾದ ಅಲೋಕ ಕುಮಾರ ಅವರು ನವೆಂಬರ್ 02, 2026 ರಂದು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಕಾರಾಗೃಹದ ಭದ್ರತೆ ಮತ್ತು ಆಡಳಿತವನ್ನು ಪರಿಶೀಲನೆ ಮಾಡಿದರು.
ಬಂದಿಗಳ ಕೌಶಲ್ಯಾಬಿವೃದ್ಧಿ ಕಾರ್ಯಕ್ರಮದ ಭಾಗವಾಗಿ ರುಡ್ ಸೆಟ್ ಸಂಸ್ಥೆ ಧಾರವಾಡ ಅವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಎರೆಗೊಬ್ಬರ ತಯಾರಿಕೆ ಮತ್ತು ಬ್ಯಾಗ್ ಹಾಗೂ ಎನ್ವೆಲಪ್ ತಯಾರಿಕೆ ತರಬೇತಿಯನ್ನು ಉದ್ಘಾಟಿಸಿ ಬಂದಿಗಳು ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗುವ ಪ್ರತಿಯೊಂದು ತರಬೇತಿಗಳು ಹಾಗೂ ಮನಃಪರಿವರ್ತನಾ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡು ಉತ್ತಮ ನಾಗರೀಕರಾಗಿ ಹೊರಬರಬೇಕೆಂದು ತಿಳಿಸಿದರು.
ಉತ್ತಮ ನಡತೆಯುಳ್ಳ ಬಂದಿಗಳಿಗೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ವಿವರಿಸಿ, ಕಾರಾಗೃಹದಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಲು ಕಾರಾಗೃಹ ಸಿಬ್ಬಂದಿಗಳೊಂದಿಗೆ ಸಹಕರಿಸಲು ಸೂಚಿಸಿದರು.
ಕಾರಾಗೃಹದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಾನಿರ್ದೇಶಕರು ಭಜನಾತಂಡವನ್ನು ಪ್ರಶಂಸಿ, ಕಾರಾಗೃಹದ ವಿವಿಧ ವಿಭಾಗಳಲ್ಲಿ ಉತ್ತಮ ಕೆಲಸ ನಿರ್ವಹಿಸುವ ಬಂದಿಗಳಿಗೆ ವಿಶೇಷ ಮಾಫಿಯನ್ನು ಮಂಜೂರು ಮಾಡಿದರು. ಕಾರಾಗೃಹದ ಕಾರ್ಖಾನೆ ಉತ್ಪನ್ನಗಳನ್ನು ಪರಿಶೀಲಿಸಿ, ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು, ಸಮಯಪಾಲನೆ ಹಾಗೂ ಜವಾಬ್ದಾರಿಯುತ ಕರ್ತವ್ಯವನ್ನು ನಿರ್ವಹಿಸುವಂತೆ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಿದರು. ನಂತರ ಕೇಂದ್ರ ಕಾರಾಗೃಹ ಧಾರವಾಡದ ಅಧಿಕಾರಿಗಳು ಹಾಗೂ ಕೆ.ಎಸ್.ಐ.ಎಸ್.ಎಫ್ ಘಟಕದ ಅಧಿಕಾರಿಗಳೊಂದಿಗೆ ಸಂಸ್ಥೆಯ ಆಡಳಿತ ಮತ್ತು ಭದ್ರತೆ ಕುರಿತಂತೆ ಸಭೆ ನಡೆಸಿದರು.
ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ, ಕೆ.ಎಸ್‍ಐ.ಎಸ್‍ಎಫ್ ಸಹಾಯಕ ಕಮಾಂಡೆಂಟ್ ಮಲ್ಲಿಕಾರ್ಜುನ, ಧಾರವಾಡದ ಕೇಂದ್ರ ಕಾರಾಗೃಹ ಅಧೀಕ್ಷಕ ರಘುಪತಿ ಸಿ.ಜೆ., ಸಹಾಯಕ ಅಧೀಕ್ಷಕ ಎನ್.ಎಸ್ ಶಿವಕುಮಾರ, ಹಾವೇರಿಯ ಜಿಲ್ಲಾ ಕಾರಾಗೃಹ ಅಧೀಕ್ಷಕಿ ನಾಗರತ್ನಾ ದಾಶ್ಯಾಳ, ಹುಬ್ಬಳ್ಳಿ ತಾಲೂಕು ಉಪಕಾರಾಗೃಹ ಅಧೀಕ್ಷಕ ಶಹಾಬೊದ್ದೀನ್ ಕೆ. ಹಾಗೂ ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.*********************************






