*ಏಜೆಂಟರ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ರಮೇಶ ಮೈಲುಗೋಳ ಸೂಚನೆ*

*ಸ್ಥಾಯಿ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಧ್ಯವರ್ತಿಗಳಿಲ್ಲದೆ ಶೀಘ್ರವಾಗಿ ಮಾಡಿಕೊಡಲು ನಿರ್ದೇಶನ*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ಏಜೆಂಟರ ಹಾವಳಿ ಹೆಚ್ಚಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಮೈಲುಗೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿ ಸದಸ್ಯರು, ನಗರಸೇವಕರು ಹಾಗೂ ಸಾರ್ವಜನಿಕರಿಂದ ಈ ಕುರಿತು ದೂರುಗಳು ಬಂದಿವೆ. ಹೀಗಾಗಿ ಮಧ್ಯವರ್ತಿಗಳ ಸಹಾಯವಿಲ್ಲದೆ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಮಾಡಿಕೊಡಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಉಪಮೇಯರ್ ಹನುಮಂತ ಕೊಂಗಾಲಿ ಅವರು ಅಶೋಕನಗರದ ಬ್ಯಾಡ್ಮಿಂಟನ್ ಕೋರ್ಟ್ ಕಟ್ಟಡದ ವಾರ್ಷಿಕ ನಿರ್ವಹಣಾ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಬಾಕಿ ಮೊತ್ತವನ್ನು ಬಡ್ಡಿ ಸಹಿತ ವಸೂಲಿ ಮಾಡುವ ಹಾಗೂ ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು.
ಸಮಿತಿ ಸದಸ್ಯ ಬ್ರಹ್ಮಾನಂದ ಮಿರಜಕರ್ ಅವರು ಬಾಪಟಗಲ್ಲಿಯ ಕಾರು ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದ ಬಳಿಕ ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದರು. ಅಧಿಕಾರಿಗಳು ನೀಡಿದ ಮಾಹಿತಿಯಿಂದ ತೃಪ್ತರಾಗದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡ್ನೇಕರ, ಮುಂದಿನ ಸಭೆಗೆ ಸಮಗ್ರ ಮಾಹಿತಿ ಹಾಗೂ ಸಂಬಂಧಿಸಿದ ಸಿಬ್ಬಂದಿಯೊಂದಿಗೆ ಹಾಜರಾಗುವಂತೆ ಸೂಚಿಸಿದರು.
ಆನ್ಲೈನ್ ಆಸ್ತಿ ತೆರಿಗೆ ತಂತ್ರಾಂಶ ನಿರ್ವಹಿಸುತ್ತಿರುವ ಸಾಫ್ಟ್ವೇರ್ ಕಂಪನಿಯ ವಾರ್ಷಿಕ ನಿರ್ವಹಣಾ ಅವಧಿ ವಿಸ್ತರಣೆ, ಇ-ಆಸ್ತಿ ಕಡತಗಳ ಅನುಮೋದನೆ ವಿಳಂಬ, ಸಹ್ಯಾದ್ರಿ ನಗರದ ಸಾರ್ವಜನಿಕ ಉದ್ಯಾನವನಕ್ಕೆ ‘ವೀರ ಸಾವರ್ಕರ್ ಉದ್ಯಾನವನ’ ಎಂದು ನಾಮಕರಣ ಮಾಡುವ ಪ್ರಸ್ತಾವನೆ ಸೇರಿದಂತೆ ವಿವಿಧ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು. ಕೆಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇನ್ನು ಕೆಲವು ವಿಷಯಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಸೂಚಿಸಲಾಯಿತು.
ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನದ ಅಗತ್ಯವಿದ್ದು, ತೆರಿಗೆ ವಸೂಲಿಗೆ ಆದ್ಯತೆ ನೀಡಿ ಪಾಲಿಕೆಯ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಶಂಕರ ಪಾಟೀಲ, ರವಿರಾಜ್ ಸಂಬ್ರೇಕರ್, ದೀಪಾಲಿ ಟೋಪಗಿ, ಮೋದಿನಸಾಬ್ ಮತವಾಲೆ, ಬಸವರಾಜ ಮೋದಗೆಕರ್, ನಗರಸೇವಕರು, ಕಂದಾಯ ಶಾಖೆಯ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ಶಾಖೆಯ ಉಪ ಆಯುಕ್ತ ಉದಯಕುಮಾರ ಬಿ.ಟಿ., ಪರಿಷತ್ ಕಾರ್ಯದರ್ಶಿ ರಮೇಶ ಬಡಿಗೇರ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.******************************






