ಪ್ರಕೃತಿ ಬೆಳಗಾವಿ

*ರಾಜ್ಯೋತ್ಸವದ ಸಂಭ್ರಮದಲ್ಲಿ ಕಳೆದುಹೋದ ನಾಲ್ಕು ಮೊಬೈಲ್‌ಗಳನ್ನು ವಾರಸುದಾರರಿಗೆ ತಲುಪಿಸಿದ ಕರ್ನಾಟಕ ರಕ್ಷಣಾ ಟೈಗರ್ಸ್ ಅಧ್ಯಕ್ಷ ಬಾಳಪ್ಪ ಗುಡಗೇನಟ್ಟಿ*

*ಮಾನವೀಯತೆ ಮೆರೆದ ಕನ್ನಡದ ಕಾರ್ಯಕರ್ತರು; ಸಾರ್ವಜನಿಕರಿಂದ ಮೆಚ್ಚುಗೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದ ಅದ್ದೂರಿ ಆಚರಣೆಯ ಸಂಭ್ರಮದಲ್ಲಿ ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದ ಕನ್ನಡಾಭಿಮಾನಿಗಳು ತಮ್ಮ ಮೊಬೈಲ್‌ಗಳ ಬಗ್ಗೆ ಗಮನ ಹರಿಸದೆ ನಾಲ್ಕು ಮೊಬೈಲ್‌ಗಳನ್ನು ಕಳೆದುಕೊಂಡಿದ್ದರು. ಈ ಮೊಬೈಲ್‌ಗಳು ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ವೇದಿಕೆಯ ಮುಂಭಾಗದಲ್ಲಿ ಪತ್ತೆಯಾಗಿದ್ದವು.

ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ಅಧ್ಯಕ್ಷ ಬಾಳಪ್ಪ ಬಿ. ಗುಡಗೇನಟ್ಟಿ ಅವರು ನವೆಂಬರ್ 1ರಂದು ನಾಲ್ಕು ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅವುಗಳ ವಾರಸುದಾರರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾದರು. ಈ ಪೈಕಿ ಮೂರು ಮೊಬೈಲ್‌ಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸಿದರು. ಮತ್ತೊಂದು ಐಫೋನ್ ಅನ್ನು ಬೆಳಗಾವಿಯ ಕಡೆ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಿಸಿದ್ದರಿಂದ, ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಕರ್ನಾಟಕ ರಾಜ್ಯೋತ್ಸವದಂದು ಕನ್ನಡದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ಕನ್ನಡಿಗರು ಕನ್ನಡದ ಹಾಡು, ನೃತ್ಯ ಹಾಗೂ ನಾಡಿನ ಅಭಿಮಾನದಲ್ಲಿ ತಲ್ಲೀನರಾಗಿದ್ದರು. ಈ ಸಂಭ್ರಮದ ನಡುವೆ ತಮ್ಮ ಜೇಬಿನಲ್ಲಿದ್ದ ಮೊಬೈಲ್‌ಗಳು ಕೆಳಗೆ ಬಿದ್ದಿರುವುದೂ ಅವರ ಗಮನಕ್ಕೆ ಬಂದಿರಲಿಲ್ಲ.

ಇಂತಹ ಸಂದರ್ಭದಲ್ಲಿ ಕಳೆದುಹೋದ ಮೊಬೈಲ್‌ಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದೆ, ಅವುಗಳನ್ನು ವಾರಸುದಾರರಿಗೆ ಮರಳಿಸುವ ಮೂಲಕ ಬಾಳಪ್ಪ ಗುಡಗೇನಟ್ಟಿ ಅವರು ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಮೆರೆದಿದ್ದಾರೆ.

ಕನ್ನಡದ ಮೇಲಿನ ಅಭಿಮಾನ ಕೇವಲ ಘೋಷಣೆಗಳಲ್ಲಿ ಮಾತ್ರವಲ್ಲ, ಇಂತಹ ಮಾನವೀಯ ಕಾರ್ಯಗಳಲ್ಲಿಯೂ ವ್ಯಕ್ತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಿಜಕ್ಕೂ ಇದು ಕನ್ನಡಿಗರ ಹೆಮ್ಮೆಯ ಹೃದಯವಂತಿಕೆಯ ಪ್ರತೀಕವಾಗಿದೆ.********************************

Leave a Reply

Your email address will not be published. Required fields are marked *

Back to top button