ಪ್ರಕೃತಿ ಬೆಳಗಾವಿ

*ಕನ್ನಡ ರಾಜ್ಯೋತ್ಸವಕ್ಕೆ ಕುಂದಾನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಮಾರ್ಗದಲ್ಲಿ ಬದಲಾವಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನ.1ರಂದು ಬೆಳಗಾವಿ ನಗರದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯೋತ್ಸವದ ಮೆರವಣಿಗೆ ಶಾಂತಿಯುತವಾಗಿ ನಡೆಯಲು ನಗರಾದ್ಯಂತ ಸುಮಾರು 2,600ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭದ್ರತೆಗಾಗಿ 10 ಕೆಎಸ್‌ಆರ್‌ಪಿ ಹಾಗೂ 8 ಸಿಎಆರ್ ತುಕಡಿಗಳ ಜೊತೆಗೆ ಎಸ್‌ಡಿಆರ್‌ಎಫ್ ತಂಡವನ್ನೂ ನಿಯೋಜಿಸಲಾಗಿದೆ. ನಗರದಲ್ಲಿರುವ ಒಟ್ಟು 25 ಸಾವಿರ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಮೆರವಣಿಗೆ ಮಾರ್ಗ ಹಾಗೂ ಅತಿಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 540 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುತ್ತಿದೆ.

ಮೆರವಣಿಗೆ ಮಾರ್ಗದಲ್ಲಿ 4 ಡ್ರೋನ್ ಕ್ಯಾಮೆರಾಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ 18 ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ವಿದ್ವಂಸಕ ಕೃತ್ಯಗಳನ್ನು ತಡೆಯಲು 2 ಎಎಸ್‌ಸಿ ತಂಡಗಳು ಕಾರ್ಯನಿರ್ವಹಿಸಲಿವೆ. ನಗರಾದ್ಯಂತ 12 ರೌಡಿ ನಿಗ್ರಹ ದಳ, 12 ಆಂಟಿ-ಸ್ಟ್ಯಾಟಿಂಗ್ ತಂಡಗಳು ಹಾಗೂ 5 ಮಾದಕ ವಸ್ತು ಪರಿಶೀಲನಾ ತಂಡಗಳನ್ನು ನಿಯೋಜಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸಂದೇಶಗಳ ಮೇಲೆ ದಿನದ 24 ಗಂಟೆಯೂ ನಿಗಾ ಇಡಲು 13 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮೆರವಣಿಗೆ ಮಾರ್ಗದಲ್ಲಿ 12 ಪುಷ್‌ಪಾತ್ ಮತ್ತು ಪಿಕಪ್ ಪಾಯಿಂಟ್‌ಗಳನ್ನು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸೆಂಟ್ರಿ ಮತ್ತು ಬೈಲೇನ್ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಡಿಜೆ ವ್ಯವಸ್ಥೆಯಿಂದ ಉಂಟಾಗುವ ಶಬ್ದಮಾಲಿನ್ಯ ನಿಯಂತ್ರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶೇಷ ತಂಡಗಳು ಪರಿಶೀಲನೆ ನಡೆಸಲಿವೆ. ಮುಂಜಾಗ್ರತಾ ಕ್ರಮವಾಗಿ 2 ಸ್ಥಳಗಳಲ್ಲಿ ಆಂಬುಲೆನ್ಸ್ ಹಾಗೂ 2 ಸ್ಥಳಗಳಲ್ಲಿ ಅಗ್ನಿಶಾಮಕ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ನಗರವನ್ನು 32 ಸೆಕ್ಟರ್‌ಗಳಾಗಿ ವಿಂಗಡಿಸಿ 33 ಶಕ್ತಿ, 15 ಹೊಯ್ಸಳ ಹಾಗೂ 9 ಹೈವೇ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜಿಸಲಾಗಿದೆ. ಮಹಾನಗರ ಪಾಲಿಕೆ, ಹೆಸ್ಕಾಂ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಂದೋಬಸ್ತ್ ವ್ಯವಸ್ಥೆ ರೂಪಿಸಲಾಗಿದೆ.

ಸಾರ್ವಜನಿಕರ ಸಂಚಾರ ಸುವ್ಯವಸ್ಥೆಗಾಗಿ 75 ಕಡೆಗಳಲ್ಲಿ ಬ್ಯಾರಿಕೇಡಿಂಗ್ ಪಾಯಿಂಟ್‌ಗಳನ್ನು ಹಾಗೂ 4 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಗರದ ಆಯ್ದ ಸ್ಥಳಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.*******************************

Leave a Reply

Your email address will not be published. Required fields are marked *

Back to top button