ಪ್ರಕೃತಿ ಬೆಳಗಾವಿ

*ಸಂಗೊಳ್ಳಿ ರಾಯಣ್ಣ ವಸತಿ ನಿಲಯಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ: ಆಹಾರ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಅ.31 : ರಾಜ್ಯ ಲೋಕಾಯುಕ್ತದ ಮಾನ್ಯ ಉಪ ಲೋಕಾಯುಕ್ತರಾದ ಬಿ. ವೀರಪ್ಪ ಅವರು ಶನಿವಾರ (ಅ.31) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಶೋಕ ನಗರದ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಹಾಗೂ ಆಹಾರ ವ್ಯವಸ್ಥೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಅಡುಗೆ ಕೋಣೆ, ವಿದ್ಯಾರ್ಥಿಗಳಿಗೆ ನೀಡುವ ಅಲ್ಪಾಹಾರ ಹಾಗೂ ಊಟದ ಗುಣಮಟ್ಟವನ್ನು ಪರಿಶೀಲಿಸಿ ಮಾಹಿತಿ ಪಡೆದರು. ವಸತಿ ಶಾಲೆಯಲ್ಲಿ ಒಟ್ಟು 120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವಷ್ಟು ಹಾಸಿಗೆಗಳನ್ನು (ಬೆಡ್) ಒದಗಿಸಬೇಕು. ವಿದ್ಯಾರ್ಥಿಗಳಿಗೆ ನೀಡುವ ಹಾಸಿಗೆ, ಹೊದಿಕೆಗಳ ಗುಣಮಟ್ಟ ಹಾಗೂ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ವಸತಿ ಸೌಲಭ್ಯಗಳಿಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಮತ್ತು ಉದ್ದೇಶಿತ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಗ್ರಂಥಾಲಯ, ಊಟದ ಕೋಣೆ, ಡೈನಿಂಗ್ ಟೇಬಲ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ರಿಜಿಸ್ಟರ್‌ಗಳು, ಹಾಜರಾತಿ ಪುಸ್ತಕಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವುದರ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿಗಳ ವಸ್ತುಗಳನ್ನು ಇರಿಸಿಕೊಳ್ಳಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ವಸತಿ ಶಾಲೆಯ ಕೊಠಡಿಗಳು, ಶೌಚಾಲಯಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಗದಿಪಡಿಸಿರುವ ಮೆನು ಪಟ್ಟಿಯ ಪ್ರಕಾರವೇ ವಿದ್ಯಾರ್ಥಿಗಳಿಗೆ ಊಟ ಮತ್ತು ಅಲ್ಪಾಹಾರ ಒದಗಿಸಬೇಕು. ಆಹಾರದ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳಗಾವಿ ಲೋಕಾಯುಕ್ತ ಅಧೀಕ್ಷಕರು ಪ್ರಸನ್ನ ದೇಸಾಯಿ, ಲೋಕಾಯುಕ್ತ ಉಪ ನಿಬಂಧಕರು ಅರವಿಂದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.********************************

Leave a Reply

Your email address will not be published. Required fields are marked *

Back to top button