ಪ್ರಕೃತಿ ಬೆಳಗಾವಿ

*ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ‌ ಹೊಣೆ: ಉಪ ಲೋಕಾಯುಕ್ತ ಬಿ.ವೀರಪ್ಪ*

*ಲೋಕಾಯುಕ್ತ: ಬಾಕಿ ಪ್ರಕರಣಗಳ ವಿಚಾರಣೆ-ವಿಲೇವಾರಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಅ.30 : ಸಮಾಜದಲ್ಲಿ ಭ್ರಷ್ಟಾಚಾರ ಎಂಬ ಭೂತವನ್ನು ನಾವೆಲ್ಲರೂ ಕೂಡಿ ಬೆಳೆಸಿಕೊಂಡು ಬಂದಿದ್ದೇವೆ. ಭ್ರಷ್ಟಾಚಾರವನ್ನು ಬರೀ ಲೋಕಾಯುಕ್ತ ಸಂಸ್ಥೆಯಿಂದ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ; ಸಮಾಜದ ಪ್ರತಿಯೊಬ್ಬರೂ ಭ್ರಷ್ಟಾಚಾರ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾಯನೂರ್ತಿ ಬಿ.ವೀರಪ್ಪ ಕರೆ ನೀಡಿದರು.

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ(ಅ.30) ನಡೆದ ಬೆಳಗಾವಿ ಮತ್ತು ಬೈಲಹೊಂಗಲ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗಗಳು ವಿಫಲವಾಗುತ್ತಿರುವ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನ್ಯಾಯಾಂಗ ಮತ್ತು ನಾಲ್ಕನೇ ಅಂಗ ಎಂದು ಕರೆಯಲಾಗುವ ಪತ್ರಿಕಾರಂಗ ಕೂಡ ಇತ್ತೀಚೆಗೆ ಅಶಕ್ತವಾಗುತ್ತಿವೆ ಎಂದು ಅನಿಸತೊಡಗಿದೆ. ಸಮಾಜದಲ್ಲಿ ಎಲ್ಲೇ ಅನ್ಯಾಯ ಆದಾಗ ನ್ಯಾಯಾಂಗ ಮತ್ತು ಪತ್ರಿಕಾರಂಗಗಳು ಧ್ವನಿ ಎತ್ತುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ.

ಕರ್ನಾಟಕ ಲೋಕಾಯುಕ್ತ ತನ್ನ ನಿಷ್ಪಕ್ಷಪಾತ ತನಿಖೆ ಹಾಗೂ ಕಾರ್ಯಾಚರಣೆಯಿಂದ ದೇಶದಲ್ಲಿ ತನ್ನದೇ ಛಾಪು ಮೂಡಿಸಿದೆ. ಆದಾಗ್ಯೂ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಸಾಧ್ಯವಾಗುತ್ತಿಲ್ಲ; ಭ್ರಷ್ಟಾಚಾರಿಗಳನ್ನು ಸಮಾಜ ಮತ್ತು ಕುಟುಂಬದವರು ಬಹಿಷ್ಕರಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಇದೇ ಮದ್ದು ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

*ಭ್ರಷ್ಟಾಚಾರ ನಿರ್ಮೂಲನೆಯಾದರೆ ಭಾರತ ಬಲಿಷ್ಠ ದೇಶವಾಗಲಿದೆ:*

ವಿದ್ಯಾವಂತ ಮೋಸಗಾರರು ಹೆಚ್ಚಾಗುತ್ತಿರುವುದಕ್ಕೆ ಕಾರಣ ಕೂಡ ಸಮಾಜ. ಚುನಾವಣೆ ಸಂದರ್ಭದಲ್ಲಿ ಹಣ ಪಡೆದು ಮತದಾನ ಮಾಡುತ್ತಿರುವುದರ ಫಲವಾಗಿ ಸಮಾಜ ಅಧೋಗತಿಗೆ ಹೊರಟಿದೆ.
ಸಮಾಜ ಬದಲಾದರೆ ಮಾತ್ರ ಎಲ್ಲವೂ ಸರಿ ಹೋಗುತ್ತದೆ. ಸ್ವಾರ್ಥ ಬಿಟ್ಟು ಭ್ರಷ್ಟಾಚಾರ ಭೂತ ತೊಲಗಿಸಿದರೆ ಭಾರತ ವಿಶ್ವದ ಬಲಿಷ್ಟ ರಾಷ್ಟ್ರವಾಗಲಿದೆ.
ಭ್ರಷ್ಟಾಚಾರದಲ್ಲಿ ಈಗ ಸ್ಪರ್ಧೆ ಏರ್ಪಟ್ಟಿದ್ದು, ಪ್ರಕೃತಿಯೇ ಎಚ್ಚರಿಕೆ ಗಂಟೆ‌ ಬಾರಿಸುತ್ತಿದೆ. ಇದನ್ನು ಅರಿತು ನಾವು ಬದಲಾಗಬೇಕಿದೆ.

ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸಮಪಾಲು ಸಮಬಾಳು ಎಂಬಂತೆ‌ ಹಾಗೂ ಭಾರತದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿರುತ್ತದೆ.

ಸ್ವಾತಂತ್ರ್ಯ ಬಂದು 80 ವರ್ಷವಾದರೂ ಸಂವಿಧಾನಾತ್ಮಕ ಹಕ್ಕುಗಳು ಇನ್ನೂ ಮರೀಚಿಕೆಯಾಗಿವೆ.
ಬರೀ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ; ಆದರೆ ಕರ್ತವ್ಯಗಳ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದು ಎಲ್ಲ ಕ್ಷೇತ್ರಗಳಲ್ಲಿ ಕಂಡುಬರುತ್ತಿದೆ.
ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡುವ ನಾವು ಇನ್ನೊಂದೆಡೆ ಭ್ರಷ್ಟಾಚಾರದಲ್ಲಿ ತೊಡಗುತ್ತೇವೆ.

ಅನೇಕ‌ ಮಹನೀಯರು ರಕ್ತ, ಬೆವರು ಹರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸೈನಿಕರು ಹಗಲುರಾತ್ರಿ ಕೆಲಸ ಮಾಡಿ ನಮ್ಮನ್ನು ಸುರಕ್ಷಿತವಾಗಿಟ್ಟಿದ್ದಾರೆ; ದೇಶದ ಬೆನ್ನೆಲುಬು ಆಗಿರುವ ರೈತರು ಕೂಡ ಕಷ್ಟಪಡುವಂತಾಗಿದೆ. ಇದಕ್ಕೆಲ್ಲ ನಾವೆಲ್ಲರೂ ಕಾರಣರಾಗಿದ್ದೇವೆ.

*ಲೋಕಾಯುಕ್ತ ಪ್ರಯತ್ನ ಮಾಜಿ ಸೈನಿಕರಿಗೆ ನಿವೇಶನ:*

ಲೋಕಾಯುಕ್ತ ಸಂಸ್ಥೆಯ ನಿರಂತರ ಪ್ರಯತ್ನದ ಫಲವಾಗಿ ಎಲ್ಲ ಮಾಜಿ ಸೈನಿಕರಿಗೆ ಹಾಗೂ ವಾರಸುದಾರರಿಗೆ ಆಯಾ ಜಿಲ್ಲೆ/ತಾಲ್ಲೂಕಿನಲ್ಲಿ ನಿವೇಶನ ನೀಡಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
ಸತತ ಒಂದೂವರೆ ವರ್ಷದ ಪ್ರಯತ್ನದ ಫಲವಾಗಿ ಸರಕಾರ ಇದೀಗ ಆದೇಶ ಹೊರಡಿಸಿದ್ದು, ನಿವೇಶನ ಗುರುತಿಸಿ ವಿತರಿಸುವ ಕೆಲಸ ಯುದ್ಧೋಪಾದಿಯಲ್ಲಿ ಆಗಬೇಕಿದೆ.

*ಸುಳ್ಳು ಕೇಸ್ ಗಳಿಂದ ನ್ಯಾಯ ವಿಳಂಬ: ದೂರುದಾರರಿಗೆ ಜೈಲು ಶಿಕ್ಷೆ- ಎಚ್ಚರಿಕೆ*

ಇತ್ತೀಚಿನ ದಿನಗಳಲ್ಲಿ ಸುಳ್ಳು ಪ್ರಕರಣ; ಮೂಕರ್ಜಿಗಳಿಂದ ನಿಜವಾದ ಪ್ರಕರಣಗಳ ವಿಚಾರಣೆ ಮಾಡುವುದು ಮತ್ತು ನ್ಯಾಯ ಒದಗಿಸುವುದು ವಿಳಂಬವಾಗುತ್ತಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಬೇಸರ‌ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರು ಎಂದುಕೊಂಡು ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ದೂರುದಾರರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದರು.
ಇದೇ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವ ಅವಕಾಶಗಳು ಲೋಕಾಯುಕ್ತರಿಗಿದೆ. ಆದ್ದರಿಂದ ಎಚ್ಚರಿಕೆಯಿಂದ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ , ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು(ವಿಚಾರಣೆ) ಅರವಿಂದ, ಬೆಳಗಾವಿ ಡಿಎಫ್ಓ ಕ್ರಾಂತಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

ಬೆಳಗಾವಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಅವರು ಸ್ವಾಗತಿಸಿದರು.

ಬೆಳಗಾವಿ ಹಾಗೂ ಬೈಲಹೊಂಗಲ ಉಪ ವಿಭಾಗದ ವ್ಯಾಪ್ತಿಯಲ್ಲಿನ ದೂರುದಾರರು ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.*****************************

Leave a Reply

Your email address will not be published. Required fields are marked *

Back to top button