ಪ್ರಕೃತಿ ಬೆಳಗಾವಿ

*₹8.04 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಹೊಸ ರೂಪ-ರೋಬೋಟಿಕ್ ಮತ್ತು ಭಾಷಾ ಪ್ರಯೋಗಾಲಯ ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಆ.22 : ನಗರದ ಕಾಕತಿವೇಸ್ ನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಸರದಾರ ಪ್ರೌಢಶಾಲೆ)ಯ ಮೂಲಸೌಕರ್ಯ ಬಲಪಡಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರೋಬೋಟಿಕ್, ಭಾಷಾ ಹಾಗೂ ವರ್ಚುವಲ್ ಪ್ರಯೋಗಾಲಯಗಳನ್ನು ಶಾಸಕ ಆಸಿಫ್(ರಾಜು) ಸೇಠ್ ಅವರು ಶನಿವಾರ(ಆ.22) ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ 2025-26ನೇ ಸಾಲಿನ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ಪೈಕಿ ₹5 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ಕೂಡ ನೆರವೇರಿಸಲಾಯಿತು.

ನಂತರ ಮಾತನಾಡಿದ ಶಾಸಕ ಸೇಠ್ ಅವರು, ಶಾಸಕ ರಾಜು ಸೇಠ್ ಮಾತನಾಡಿ, “ತಾವು ಚುನಾಯಿತರಾದ ಆರಂಭದಲ್ಲೇ ಶಾಲೆಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಶೌಚಾಲಯದ ಸಮಸ್ಯೆ ಹೇಳಿಕೊಂಡಿದ್ದರು. ಬಳಿಕ ತಕ್ಷಣವೇ ಶೌಚಾಲಯ ನಿರ್ಮಿಸಿ, ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಗಮನಹರಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿ ನಾಡಿಗೆ ಕೀರ್ತಿ ತರಬೇಕು” ಎಂದು ಕರೆ ನೀಡಿದರು.

ರೋಬೋಟಿಕ್ಸ್, ಭಾಷಾ ಪ್ರಯೋಗಾಲಯ ಹಾಗೂ ಸ್ಮಾರ್ಟ್‌ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಮತ್ತು ಕೌಶಲಾಧಾರಿತ ಕಲಿಕೆಗೆ ಹೊಸ ಅವಕಾಶ ಕಲ್ಪಿಸಲಿವೆ. ಸರ್ಕಾರಿ ಶಾಲೆಯನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಪ್ರಯತ್ನಕ್ಕೆ ಈ ಯೋಜನೆ ಮತ್ತಷ್ಟು ಬಲ ತುಂಬಲಿದೆ ಎಂದು ಹೇಳಿದರು.

ಬೆಳಗಾವಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ₹8.04 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಯ ಸ್ಪರ್ಶ ನೀಡಲಾಗುತ್ತಿದೆ ಎಂದು ಶಾಸಕ ಸೇಠ್ ತಿಳಿಸಿದರು.

ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗುವುದು. ಉಳಿದಂತೆ ₹3.04 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಸೌಲಭ್ಯ, ರೋಬೋಟಿಕ್ಸ್ ಹಾಗೂ ಭಾಷಾ ಪ್ರಯೋಗಾಲಯ, ವರ್ಕ್‌ಶಾಪ್‌ಗಳ ಉನ್ನತೀಕರಣ ಸೇರಿದಂತೆ ವಿವಿಧ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂಬುದು ಸಚಿವ ಸತೀಶ್ ಜಾರಕಿಹೊಳಿ ಅವರ ಆಶಯವಾಗಿದೆ ಎಂದರು.

ಡಿಡಿಪಿಐ ಲೀಲಾವತಿ ಹಿರೇಮಠ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಶಾಲಾ ಅಭಿವೃದ್ಧಿಗೆ ₹8 ಕೋಟಿಗೂ ಅಧಿಕ ಅನುದಾನ ಒದಗಿಸಿದ್ದಾರೆ. ಸುಮಾರು 2 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಶಾಲೆಯಲ್ಲಿ ಆಧುನಿಕ ಸೌಲಭ್ಯ ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಉಪ ಮಹಾಪೌರ ಹನುಮಂತ ಕೊಂಗಾಲಿ, ಬಿಇಒ ರವಿ ಭಜಂತ್ರಿ, ಸೇರಿದಂತೆ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.*******************************

Leave a Reply

Your email address will not be published. Required fields are marked *

Back to top button