*ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ನಿರಂತರವಾಗಿ ಕೂಲಿ ಕೆಲಸ ಒದಗಿಸಬೇಕು ಎಂದು ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಕುರಿತು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಮಳೆ ಸಮರ್ಪಕವಾಗಿ ಆಗದೇ ಇರುವುದರಿಂದ ಗ್ರಾಮೀಣ ಭಾಗದ ಕೂಲಿಕಾರರಿಗೆ ಕೂಲಿ ಕೆಲಸದ ಅಗತ್ಯತೆ ಇದೆ. ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲು ಅನುಮೋದಿತ ಕಾಮಗಾರಿಗಳು ಇಲ್ಲದಿದ್ದ ಪಕ್ಷದಲ್ಲಿ ಸದ್ಯ 5 ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಿದರೆ ತುರ್ತಾಗಿ ಅನುಮೋದನೆ ನೀಡಲಾಗುವುದು. ಹೀಗಾಗಿ, ಈ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬರ ನಿರ್ವಹಣೆ ಕಾಮಗಾರಿಗಳಿಗೆ ಆದ್ಯತೆ ನೀಡಿ:
ಗ್ರಾಪಂ ವ್ಯಾಪ್ತಿಯಲ್ಲಿ ಬರಗಾಲ ನಿರ್ವಹಣೆ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಕೂಲಿಕಾರರು ಕೆಲಸಕ್ಕಾಗಿ ಗುಳೆ ಹೋಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಬೇಕು. ಶಾಶ್ವತ ಜೀವನೋಪಾಯಕ್ಕೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಕೂಡ ಕೈಗೊಳ್ಳಲು ಕ್ರಮವಹಿಸಬೇಕು. ಯೋಜನೆಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಿ:
ವಿಬಿ-ಜಿ ರಾಮ್ ಜಿ ಯೋಜನೆಯಡಿ ಒಟ್ಟು 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ನೀರಿನ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯಗಳು, ಜೀವನೋಪಾಯ ಅಭಿವೃದ್ಧಿ, ನೈಸರ್ಗಿಕ ವಿಕೋಪ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಹೀಗಾಗಿ, ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಯೋಜನೆ ರೂಪಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗೋಮಾಳ ಗುರುತಿಸಿ : ಗ್ರಾಮೀಣ ಭಾಗದಲ್ಲಿ ಗೋಮಾಳಗಳನ್ನು ಗುರುತಿಸಿ ದನಕರುಗಳಿಗೆ ಮೇವು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಅನುಮೋದಿಸಲ್ಪಟ್ಟ ಕಾಮಗಾರಿಗಳನ್ನು ಕೈಗೊಂಡು ಕೂಲಿಕಾರರಿಗೆ ಕೆಲಸ ಒದಗಿಸುವಂತೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ, ಅರಣ್ಯ, ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೂಡ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರೆಪ್ಪನವರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ. ಕೋಳೆಕರ್, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚೇತನಕುಮಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಈಶ್ವರ ಗಡಾದ, ಡಿಎಫ್ಒ ರಾಜೇಶ್ವರಿ ಈರನಟ್ಟಿ ಸೇರಿ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಎಲ್ಲ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ತಾಲೂಕಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.*********************************






