ಪ್ರಕೃತಿ ಬೆಳಗಾವಿ

*ಬೆಳಗಾವಿಯಲ್ಲಿ ‘ಕರ್ನಾಟಕ ರಕ್ಷಣಾ ಟೈಗರ್ಸ್’ ಸಂಘಟನೆಗೆ ವಿದ್ಯುಕ್ತ ಚಾಲನೆ*

*ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ – ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ತೀವ್ರ ಹೋರಾಟದ ಎಚ್ಚರಿಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕದ ನೆಲ, ಜಲ, ಭಾಷೆ, ಗಡಿ ಹಿತಾಸಕ್ತಿ ಹಾಗೂ ಸಾಮಾಜಿಕ ಸೇವೆಯನ್ನು ಪ್ರಮುಖ ಧ್ಯೇಯವಾಗಿಟ್ಟುಕೊಂಡು ‘ಕರ್ನಾಟಕ ರಕ್ಷಣಾ ಟೈಗರ್ಸ್’ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕಕ್ಕೆ ಭಾನುವಾರ ನಗರದ ಕನ್ನಡ ಭವನದಲ್ಲಿ ರಾಜ್ಯಾಧ್ಯಕ್ಷ ಆರ್. ಹರೀಶ್ ಅವರು ವಿದ್ಯುಕ್ತ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯಾಧ್ಯಕ್ಷ ಹರೀಶ್ ಅವರನ್ನು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಉತ್ತರ ಕರ್ನಾಟಕದ ಜಾನಪದ ಕಲಾವಿದರ ವಾದ್ಯಘೋಷದೊಂದಿಗೆ ಕನ್ನಡಿಗರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಅಲ್ಲಿಂದ ಅಂಬೇಡ್ಕರ್ ರಸ್ತೆ, ರಾಮದೇವ್ ಮಾರ್ಗವಾಗಿ ಶ್ರೀ ಆಸ್ಪತ್ರೆ ಹಿಂಭಾಗದಲ್ಲಿರುವ ಕನ್ನಡ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಆರ್. ಹರೀಶ್, “ಬೆಳಗಾವಿ ಗಂಡು ಮೆಟ್ಟಿದ ನಾಡು. ಇಂತಹ ಐತಿಹಾಸಿಕ ನಾಡಿನಲ್ಲಿ ‘ಕರ್ನಾಟಕ ರಕ್ಷಣಾ ಟೈಗರ್ಸ್’ ಸಂಘಟನೆಯನ್ನು ಮೊದಲ ಬಾರಿಗೆ ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿ. ಇದು ಹೊಸ ಸಂಘಟನೆಯಾಗಿರಬಹುದು, ಆದರೆ ನಮ್ಮ ಹೋರಾಟ ಹೊಸದಲ್ಲ. ಕಳೆದ 25–26 ವರ್ಷಗಳಿಂದ ಕನ್ನಡ ನಾಡು, ನೆಲ, ಜಲ, ಭಾಷೆ ಹಾಗೂ ಗಡಿ ಹಿತಾಸಕ್ತಿಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ.

ಈಗ ‘ಕರ್ನಾಟಕ ರಕ್ಷಣಾ ಟೈಗರ್ಸ್’ ಹೆಸರಿನಲ್ಲಿ ಇನ್ನಷ್ಟು ಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೋರಾಟ ನಡೆಸಲಿದ್ದೇವೆ” ಎಂದು ಹೇಳಿದರು.
“ರಾಜ್ಯದ ನೆಲ, ಜಲ, ಭಾಷೆ ಅಥವಾ ಗಡಿ ವಿಚಾರಕ್ಕೆ ಧಕ್ಕೆ ಬಂದರೆ ಕರ್ನಾಟಕ ರಕ್ಷಣಾ ಟೈಗರ್ಸ್ ಕೇವಲ ಹೆಸರಿನ ಟೈಗರ್ಸ್ ಅಲ್ಲ, ನಿಜವಾದ ಟೈಗರ್ಸ್ ಎಂಬುದನ್ನು ಕಾರ್ಯದ ಮೂಲಕ ತೋರಿಸುತ್ತೇವೆ. ಗಡಿ ವಿವಾದ ಇಂದು-ನಿನ್ನೆಯ ವಿಷಯವಲ್ಲ. ಹಲವು ದಶಕಗಳಿಂದ ನಡೆಯುತ್ತಿರುವ ವಿಚಾರವಾಗಿದ್ದು, ನ್ಯಾಯಾಲಯದಲ್ಲಿಯೂ ಪ್ರಕರಣಗಳು ವಿಚಾರಣೆಯಲ್ಲಿವೆ.

ಆದ್ದರಿಂದ ಜನರು ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳಿಗೆ ಕಿವಿಗೊಡಬಾರದು. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ನಮ್ಮ ನಾಡಿನ ಪರವಾಗಿ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದರು.

ರಾಜ್ಯ ಸರ್ಕಾರಗಳ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, “ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕನ್ನಡ, ಗಡಿ ಹಾಗೂ ಜನರ ಸಮಸ್ಯೆಗಳ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಬಿಸಿ ಮುಟ್ಟುವಂತಹ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆ ನಡೆಸಲಿದೆ” ಎಂದು ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಅಂಗೀಕರಿಸುವಂತೆ ಒತ್ತಾಯಿಸಿ, ಗಡಿ, ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಗಮನಾರ್ಹವಾಗಿ, ಈ ಸಂಘಟನೆ ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ‘ಕರ್ನಾಟಕ ರಕ್ಷಣಾ ಟೈಗರ್ಸ್’ ಹೆಸರಿನಲ್ಲಿ ಹೊಸ ರೂಪದಲ್ಲಿ ಕಾರ್ಯಾರಂಭ ಮಾಡಿದೆ.

ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಹರೀಶ್, ಬೆಳಗಾವಿ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ, ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ನಗರ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಿರಿಯ ಕನ್ನಡ ಹೋರಾಟಗಾರರು ಹಾಗೂ ಕರ್ನಾಟಕ ರಕ್ಷಣಾ ಟೈಗರ್ಸ್ ಬಳಗದ ಸದಸ್ಯರು ಉಪಸ್ಥಿತರಿದ್ದರು.*******************************

Leave a Reply

Your email address will not be published. Required fields are marked *

Back to top button