ಪ್ರಕೃತಿ ಬೆಳಗಾವಿ

*ಎಂಇಎಸ್ ಪ್ರತಿಭಟನೆಗೆ ಅನುಮತಿ: ಕನ್ನಡಪರ ಸಂಘಟನೆಗಳ ಆಕ್ರೋಶ*

*ಕನ್ನಡ ನೆಲದ ಎಲ್ಲ ಸೌಲಭ್ಯ ಪಡೆದು ಕನ್ನಡಕ್ಕೇ ಅವಮಾನ; ಎಂಇಎಸ್ಗೆ ಅನುಮತಿ ನೀಡಿದ ಕ್ರಮಕ್ಕೆ ಕನ್ನಡಿಗರ ಆಕ್ರೋಶ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕನ್ನಡ ಕಡ್ಡಾಯ ಜಾರಿಗೆ ವಿರೋಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಿರುವುದನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಗಡಿಭಾಗದ ಮರಾಠಿ ಭಾಷಿಕರನ್ನು ಆಧಾರವಾಗಿಟ್ಟುಕೊಂಡು ಎಂಇಎಸ್ ನಿರಂತರವಾಗಿ ಕನ್ನಡ ಭಾಷೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಕನ್ನಡಪರ ಮುಖಂಡರು ಆರೋಪಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡ ಭಾಷೆ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳನ್ನು ಎಂಇಎಸ್ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಕಡ್ಡಾಯ ಜಾರಿಗೆ ವಿರೋಧವಾಗಿ ಎಂಇಎಸ್ ನಡೆಸುತ್ತಿರುವ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಪ್ರತಿಭಟನೆಗೆ ಅನುಮತಿ ನೀಡಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿವೆ.
ಇತ್ತೀಚೆಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಸರ್ಕಾರದ ಆದೇಶ ಹಾಗೂ ಗೆಜೆಟ್ ಅಧಿಸೂಚನೆಯನ್ನು ಎಂಇಎಸ್ ಕಾರ್ಯಕರ್ತರು ಹರಿದು ಹಾಕಿದ ಘಟನೆ ನಡೆದಿತ್ತು.

ಇಂತಹ ಘಟನೆಗಳು ಕನ್ನಡದ ಬಗ್ಗೆ ಎಂಇಎಸ್ ಹೊಂದಿರುವ ಮನೋಭಾವವನ್ನು ಬಿಂಬಿಸುತ್ತವೆ ಎಂದು ಕನ್ನಡಪರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಎಂಇಎಸ್ಗೆ ರ್ಯಾ ಲಿ ಹಾಗೂ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಕನ್ನಡ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಚಟುವಟಿಕೆ ನಡೆಸುವವರಿಗೆ ಆಡಳಿತ ಯಂತ್ರ ಅವಕಾಶ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪರ ಸಂಘಟನೆಗಳು ಹೋರಾಟ ನಡೆಸಲು ಮುಂದಾದಾಗ ಕಾರ್ಯಕರ್ತರನ್ನು ತಡೆದು ಬಂಧಿಸಲಾಗುತ್ತದೆ. ಆದರೆ ಕನ್ನಡ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಕರ್ನಾಟಕದಲ್ಲಿ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಟ್ಟಾರೆ, ಕನ್ನಡ ನೆಲದಲ್ಲಿ ನೆಲೆಸಿಕೊಂಡು ಕನ್ನಡದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡ ಭಾಷೆಗೆ ಅವಮಾನ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕೋಟ್ – 01

“ನಾಡದ್ರೋಹಿಗಳು ಕನ್ನಡ ಕಡ್ಡಾಯ ಜಾರಿಗೆ ವಿರೋಧವಾಗಿ ಪ್ರತಿಭಟನೆ ನಡೆಸುವಾಗ ಪೊಲೀಸ್ ಅಧಿಕಾರಿಗಳನ್ನು ಮುಂದೆ ಇಟ್ಟುಕೊಂಡು ಕನ್ನಡಿಗರನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ. ರಾಜ್ಯದ ಹಿತ ಕಾಪಾಡುವ ಕನ್ನಡಿಗರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ, ರೌಡಿ ಶೀಟರ್ಗಳನ್ನು ತೆರೆಯಲಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಷಾ ವಿಚಾರದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತುತ್ತಿಲ್ಲ. ಕನ್ನಡ ನೆಲದಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡಕ್ಕೆ ಅನ್ಯಾಯ ಮಾಡುತ್ತಿರುವ ಸಂಘಟನೆಗಳನ್ನು ನಿಷೇಧಿಸಬೇಕು.

ಬೆಳಗಾವಿಯ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಮತ್ತು ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಬಂದೋಬಸ್ತ್ ನಡುವೆಯೇ ಹರಿದು ಹಾಕಲಾಗುತ್ತದೆ. ಆದರೂ ಕಾನೂನು ಮೌನವಾಗಿದೆ.”
– ದೀಪಕ್ ಗುಡಗನಟ್ಟಿ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.*************************************

Leave a Reply

Your email address will not be published. Required fields are marked *

Back to top button