*ಗಂಡನನ್ನು ಬಂಧಿಸಿ ಪತ್ನಿಗೆ ಲೈಂಗಿಕ ಕಿರುಕುಳ; ರಾತ್ರಿ ಕಾಂಪೌಂಡ್ ಹಾರಿ ಬರ್ತಾರಂತೆ ಮೂಡುಬಿದಿರೆ ಇನ್ಸ್ಪೆಕ್ಟರ್ ಕಾಟಕ್ಕೆ ಮಹಿಳೆಯರು ಕಂಗಾಲು*

ಪ್ರಕೃತಿ ಬೆಳಗಾವಿ ಸುದ್ದಿ : ಮೂವರು ಸಂತ್ರಸ್ತೆಯರು ಧೈರ್ಯ ಮಾಡಿ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಅಸಲಿಯತ್ತನ್ನು ಬಯಲು ಮಾಡಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗಂಭೀರ ಸ್ವರೂಪದ ಈ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.
ಮಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಮುಜುಗರದ ಪ್ರಸಂಗ ಬೆಳಕಿಗೆ ಬಂದಿದೆ. ರಕ್ಷಣೆ ನೀಡಬೇಕಾದ ಖಾಕಿಯೇ ಭಕ್ಷಕನಾದ ಆರೋಪವೊಂದು ಕೇಳಿಬಂದಿದ್ದು, ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಸಾಲು ಸಾಲು ಲೈಂಗಿಕ ಕಿರುಕುಳ ಹಾಗೂ ಸುಲಿಗೆಯ ಗಂಭೀರ ಆರೋಪಗಳು ಕೇಳಿಬಂದಿವೆ.
ಸಂತ್ರಸ್ತ ಮಹಿಳೆಯರೇ ಖುದ್ದು ಇನ್ಸ್ಪೆಕ್ಟರ್ನ ಕೌರ್ಯದ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.
ಗಂಡನನ್ನೇ ಅರೆಸ್ಟ್ ಮಾಡಿ ಹೆಂಡತಿಗೆ ಟಾರ್ಚರ್!
ಯಾವುದಾದರೂ ಪ್ರಕರಣದಲ್ಲಿ ಗಂಡನನ್ನು ಬಂಧಿಸಿದರೆ ಅದೇ ನೆಪದಲ್ಲಿ ಆತನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆಘಾತಕಾರಿ ಆರೋಪ ಇನ್ಸ್ಪೆಕ್ಟರ್ ಸಂದೇಶ್ ಮೇಲಿದೆ. ಲೈಂಗಿಕ ಕ್ರಿಯೆಗಾಗಿ ಮಹಿಳೆಯರಿಗೆ ನಿರಂತರವಾಗಿ ಟಾರ್ಚರ್ ನೀಡುತ್ತಿದ್ದರು ಎನ್ನಲಾಗಿದೆ. ‘ನನ್ನ ಜೊತೆ ಮಲಗು’ ಎಂದು ಮಹಿಳೆಯರನ್ನು ಪೀಡಿಸುತ್ತಿದ್ದ ಈತ, ರಾತ್ರಿ ವೇಳೆ ಮಹಿಳೆಯರ ಮನೆಯ ಗೇಟ್ ಹಾರಿ ಒಳನುಗ್ಗುತ್ತಿದ್ದ. ಅಷ್ಟೇ ಅಲ್ಲದೆ, ಮಹಿಳೆಯರ ಕೈ ಹಿಡಿದು ಬಲವಂತವಾಗಿ ಡಾನ್ಸ್ ಮಾಡಿದ ಆರೋಪವೂ ಈತನ ಮೇಲಿದೆ. ಈತನ ದೌರ್ಜನ್ಯ ತಾಳಲಾರದೆ ಹಲವು ಮಹಿಳೆಯರು ಮೌನಕ್ಕೆ ಶರಣಾಗಿದ್ದಾರೆ ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ.
ಪೋಸ್ಟಿಂಗ್ಗೆ 50 ಲಕ್ಷ ಕೊಟ್ಟಿದ್ದೇನೆ, ಹಣ ಕೊಡದಿದ್ರೆ ರೌಡಿಶೀಟ್!’
ಈ ಇನ್ಸ್ಪೆಕ್ಟರ್ ತನ್ನ ಈ ಹುದ್ದೆಗೆ ಬರಲು ಬರೋಬ್ಬರಿ 50 ಲಕ್ಷ ರೂ. ಲಂಚ ಕೊಟ್ಟಿದ್ದಾನಂತೆ! ತಾನು ಪೋಸ್ಟಿಂಗ್ಗೆ 50 ಲಕ್ಷ ಕೊಟ್ಟಿದ್ದೇನೆ ಎಂದು ಹೇಳಿಕೊಂಡೇ ಈತ ಅಮಾಯಕರಿಂದ ಹಣ ಕೀಳುತ್ತಿದ್ದ. ದುಡ್ಡು ಕೊಡದಿದ್ದರೆ ರೌಡಿಶೀಟರ್ ಪಟ್ಟಿಗೆ ಸೇರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬುದು ಸಂತ್ರಸ್ತೆಯರ ಪ್ರಮುಖ ಆರೋಪ.
ಇನ್ಸ್ಪೆಕ್ಟರ್ ಕಿರುಕುಳದ ಬಗ್ಗೆ ಮೂವರು ನೊಂದ ಮಹಿಳೆಯರು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ಆದರೆ ಕಮಿಷನರ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ (ಡೋಂಟ್ ಕೇರ್) ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತ ಹಾಗೂ ನ್ಯಾಯದ ನಿರೀಕ್ಷೆಯಲ್ಲಿದ್ದ ಮಹಿಳೆಯರು ಮಂಗಳೂರಿನಿಂದ ನೇರವಾಗಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಡಿಜಿಪಿಗೆ ಲಿಖಿತ ದೂರು ನೀಡಿದ್ದಾರೆ.
ಸದ್ಯ ಮೂವರು ಸಂತ್ರಸ್ತೆಯರು ಧೈರ್ಯ ಮಾಡಿ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಅಸಲಿಯತ್ತನ್ನು ಬಯಲು ಮಾಡಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗಂಭೀರ ಸ್ವರೂಪದ ಈ ಆರೋಪಗಳ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.******************************











