*ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಕೇಸ್ – ಮೂವರು ಆರೋಪಿಗಳು ಅಂದರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ವ್ಯಕ್ತಿಯೊಬ್ಬರನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಜುನಾಥ್, ಪ್ರಜ್ವಲ್ ಹಾಗೂ ಅಕ್ಷಯ್ ಎಂದು ಗುರುತಿಸಲಾಗಿದೆ. ಮೂವರನ್ನೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಭಾನುವಾರ ರಾತ್ರಿ ಬೆಟ್ಟದಾಸನಪುರ ಸಮೀಪ ಈ ಘಟನೆ ನಡೆದಿದೆ. ಕಿಡ್ನಾಪ್ಗೆ ಒಳಗಾದವರು ಬಿಹಾರ ಮೂಲದ ಅಶೀತ್ ಜ್ಹಾ ಎಂದು ಗುರುತಿಸಲಾಗಿದೆ. ಅಶೀತ್ ತಿರುಪಾಳ್ಯದಲ್ಲಿ ವಾಸವಿದ್ದು, ಬೇಗೂರಿನ ಅಕ್ಷಯನಗರದಲ್ಲಿ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ..
ಭಾನುವಾರ ರಾತ್ರಿ ಸ್ಪಾದಿಂದ ಮನೆ ಕಡೆ ಬೈಕ್ನಲ್ಲಿ ತಮ್ಮ ಮ್ಯಾನೇಜರ್ ಮನುಕುಮಾರ್ ಜೊತೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಏಕಾಏಕಿ ಬೈಕ್ಗೆ ಕಾರು ಡಿಕ್ಕಿ ಹೊಡೆಸಿದ್ದಾರೆ. ಬೈಕ್ನಿಂದ ಕೆಳಗೆ ಬಿದ್ದ ಅಶೀತ್ ಕಾಲಿಗೆ ಲಾಂಗ್ನಿಂದ ಹಲ್ಲೆ ನಡೆಸಿ, ಕಾರಿನಲ್ಲಿ ಬಲವಂತವಾಗಿ ಅಪಹರಿಸಲಾಗಿದೆ.
ಘಟನೆಯಲ್ಲಿ ಮನುಕುಮಾರ್ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಿಡ್ನಾಪರ್ಸ್ಗಳು ಸ್ಪಾ ಮಾಲೀಕ ಪ್ರಕಾಶ್ ಮಂಡಲ್ ಅವರಿಗೆ ಕರೆ ಮಾಡಿ, ಎರಡು ಲಕ್ಷ ರೂಪಾಯಿ ನೀಡಿದರೆ ಅಶೀತ್ನ್ನು ಬಿಡುವುದಾಗಿ ಹೇಳಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಡಿಆರ್ ಹಾಗೂ ಲೊಕೇಷನ್ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ.******************************






