ಪ್ರಕೃತಿ ಬೆಳಗಾವಿ

*ವೇಶ್ಯಾವಾಟಿಕೆ ಮಾಡು ಎಂಬ ಪೀಡನೆಗೆ ನಲುಗಿದ ಗೃಹಿಣಿ ಆತ್ಮಹತ್ಯೆ*

ಪ್ರಕೃತಿ ಬೆಳಗಾವಿ ಸುದ್ದಿ : ವೇಶ್ಯಾವಾಟಿಕೆಗೆ ಒತ್ತಾಯಿಸಿ ಮಾನಸಿಕವಾಗಿ ಹಿಂಸಿಸಿದ್ದ ಆರೋಪದ ನಡುವೆ, 11 ತಿಂಗಳ ಮಗು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ. ಈ ಘಟನೆ ಮೂರು ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ಅಂಜನಾಬಾಯಿ ಶೇಖರ್ ಪಾಟೀಲ್ (22) ಎಂದು ಗುರುತಿಸಲಾಗಿದೆ. 2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಅವರೊಂದಿಗೆ ವಿವಾಹವಾಗಿದ್ದ ಅಂಜನಾಬಾಯಿ, ಮದುವೆಯಾದ ನಂತರದಿಂದಲೇ ಪತಿ ಮನೆಯವರಿಂದ ನಿರಂತರ ಕಿರುಕುಳಕ್ಕೆ ಒಳಗಾಗುತ್ತಿದ್ದಾಳೆ ಎನ್ನಲಾಗಿದೆ. ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಹೊರಬಿದ್ದಿವೆ.

ಅಂಜನಾಬಾಯಿ ಪತಿ ಶೇಖರ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದು, ನಿತ್ಯವೂ ರಾತ್ರಿ 11–12 ಗಂಟೆಯ ನಂತರ ಮನೆಗೆ ಬರುತ್ತಿದ್ದ. ಇದನ್ನು ಪ್ರಶ್ನಿಸಿ ಬೇಗ ಮನೆಗೆ ಬರಬೇಕು ಎಂದು ಅಂಜನಾಬಾಯಿ ಹೇಳಿದ್ದಕ್ಕೆ, ಅತ್ತೆ–ಮಾವರಿಂದ ಆಕೆಯ ಮೇಲೆ ಗಂಭೀರ ವಾಗ್ವಾದ ನಡೆದಿದ್ದು, “ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ” ಎಂದು ಹೀಯಾಳಿಸಿದ್ದರಂತೆ. ಇದೇ ವೇಳೆ ವೇಶ್ಯಾವಾಟಿಕೆ ಮಾಡುವಂತೆ ಪೀಡನೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ವಿಷಯವನ್ನು ಅಂಜನಾಬಾಯಿ ತನ್ನ ಹೆತ್ತವರಿಗೂ ಹೇಳಿಕೊಂಡಿದ್ದಾಳೆ. ಆದರೆ ಪೋಷಕರು “ಇಂದು–ನಾಳೆ ಸರಿಯಾಗಬಹುದು” ಎಂದು ಸಮಾಧಾನ ಹೇಳಿ ಮರಳಿಸಿದ್ದರೆನ್ನಲಾಗಿದೆ. ನಿರಂತರ ಅವಮಾನ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ, ಕೊನೆಗೆ ಅಂಜನಾಬಾಯಿ ದುಡುಕಿನ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ಪ್ರಕರಣದಲ್ಲಿ ಅಂಜನಾಬಾಯಿ ತಂದೆ ವಿಜಯಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ಮೃತಳ ಪತಿ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.****************************

Back to top button