ಪ್ರಕೃತಿ ಬೆಳಗಾವಿ

*ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕೆ ಮಾತ್ರ ಸೀಮಿತ ; ಬಿವೈ ವಿಜಯೇಂದ್ರ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸರಕಾರ ಪಂಚ ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಬಿವೈ ವಿಜಯೇಂದ್ರ ಗಂಭೀರವಾಗಿ ಆರೋಪಿಸಿದರು. ‌

ಗುರುವಾರ ನಗರದ ಸರ್ಕೀಟ್ ಹೌಸನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದರು.

ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಅಧಿಕಾರ ಹಂಚಿಕೆ ಹಾಗೂ ಹಗರಣಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಠಿಣ ಶಬ್ದದಗಳಿಂದ ಹರಿ ಹಾಯ್ದರು.‌

ಪಂಚಗ್ಯಾರಂಟಿ ಹೆಸರಿನಲ್ಲಿ ಇತರೆ ಯಾವ ಕೆಲಸಗಳು ರಾಜ್ಯದಲ್ಲಿ ಎರಡೂವರೆ ವರ್ಷದಿಂದ ಆಗುತ್ತಿಲ್ಲ. ರಾಜ್ಯದ ಯಾವ ಶಾಸಕರಿಗೂ ಬಿಡಿಗಾಸು ಅನುದಾನ ಸಿಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಆಡಳಿತ ವ್ಯವಸ್ಥೆ ಮುಖ್ಯಮಂತ್ರಿ ಹತೋಟಿಯಲ್ಲಿಲ್ಲ. ರಾಜ್ಯದ ಅಧಿಕಾರಶಾಹಿ ಮುಖ್ಯಮಂತ್ರಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳಲು ತಮ್ಮದೇ ಶಾಸಕರನ್ನು ವಿದೇಶಕ್ಕೆ ಕಳುಹಿಸುವ ಪರಿಪಾಠ ಆರಂಭವಾಗಿದೆ.‌ಎರಡೂ ಬಣಗಳ ಕುರ್ಚಿ ಗುದ್ದಾಟದಿಂದ ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂದು‌ ಅಸಮಾಧಾನ ಹೋರ ಹಾಕಿದರು. ‌

ಬಡವರು, ರೈತರು, ಹಿಂದುಳಿದ ವರ್ಗಗಳು ಕಾಂಗ್ರೆಸ್ ಬಢಾಯಿ ನಂಬಿ ಈಗ ಮೋಸ ಹೋಗಿದ್ದೇವೆಂದು ಗೋಗರೆಯುವಂತಾಗಿದೆ. ಅಹಿಂದ ಹೆಸರು ಹೇಳಿ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರನ್ನು ಓಲೈಸುವ ರಾಜಕೀಯ ಮಾಡುತ್ತ ಸರಕಾರ ಕಾಲ ಕಳೆಯುತ್ತಿದೆ. ಅಲ್ಪಸಂಖ್ಯಾತರ ಸಾಲಗಳಿಗೆ ಶೇಕಡಾ. 100ರಷ್ಟು ಬಡ್ಡಿ ಮನ್ನಾ ಒಂದು ಬಾರಿ ಸೆಟ್ಲಮೆಂಟ್ ಮಾಡುವುದಾಗಿ ಸರಕಾರ ಘೋಷಿಸಿರುವುದು ಅಸಹಜನಡೆ.
ರಾಜ್ಯದ ಇತರ ಜನರು ಸರಕಾರವನ್ನು ಗೆಲ್ಲಿಸಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಹಿಂದುಳಿದ ವರ್ಗಗಳ 1.41 ಲಕ್ಷ ವಿದ್ಯಾರ್ಥಿಗಳಿಗೆ ಸರಕಾರಿ ಹಾಸ್ಟೇಲ್ ಸಿಗುತ್ತಿಲ್ಲ. ನುಡಿದಂತೆ ನಡೆದಿದ್ದೇವೆ ಎಂಬುವ ನಿಮ್ಮ ಮಾತಿನ ಸಾಧನೆ ಇದೇ ಏನು ಎಂದು ಪ್ರಶ್ನಿಸಿದರು. ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುವುದಷ್ಟೇ ನಿಮ್ಮ ಕೆಲಸ. ಉದ್ಯೋಗ ಸೃಷ್ಟಿ ಮಾಡುವ ನಿಮ್ಮ ಭರವಸೆ ಏನಾಯಿತು, ಎಷ್ಟು ಯುವಕರಿಗೆ ನಿಮ್ಮ ಭರವಸೆ ಅನುಕೂಲ ಮಾಡಿದೆ ಎಂದು ಪ್ರಶ್ನೆ ಮಾಡಿದರು.

ಕಳೆದ ಬಾರಿಯ ಬೆಳಗಾವಿ ಅಧಿವೇಶನದ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಉದ್ಯೋಗ ಬೇಡಿಕೆಯ ಜೆನ್ ಜೀ ಹೋರಾಟಗಾರರ ಮೇಲೆ ಪೊಲೀಸ್ ಬಲ ಪ್ರಯೋಗ ಸರಕಾರ ಮಾಡಿಸಿತು. ರಾಜ್ಯದಲ್ಲಿ 2.75ಲಕ್ಷ ಉದ್ಯೋಗ ನೇಮಕಾತಿ ಆಗಿಲ್ಲ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಈ‌ ವೇಳೆ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮುರಗೇಂದ್ರಗೌಡ ಪಾಟೀಲ ಸೇರಿದಂತೆ ಬಿಜೆಪಿ‌ ಹಲವು ಮುಖಂಡರು ಕಾರ್ಯಕರ್ತರು ಇದ್ದರು.‌***********************************

Back to top button