ಸ್ಮಶಾನ ಭೂಮಿ ಖರೀದಿಗೆ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್…!!

ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಸೆ.30 : ಜಿಲ್ಲೆಯಲ್ಲಿ ಈಗಾಗಲೇ ಪರಿಶಿಷ್ಟ ಸಮುದಾಯದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಲಾಗಿದ್ದು, ಅಗತ್ಯವಿರುವ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ಮಶಾನ ಭೂಮಿ ಖರೀದಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಸೆ.30) ನಡೆದ ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಂಡಾದಲ್ಲಿ ಪರಿಶಿಷ್ಟ ಜಾತಿ /ಪ.ಪಂಗಡದ ಸಮುದಾಯದವರಿಗೆ ಸ್ಮಶಾನ ಭೂಮಿ ಗುರುತಿಸಲು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಖಾನಾಪುರದಲ್ಲಿ ಸ್ಮಶಾನ ಭೂಮಿಗೆ ಅಗತ್ಯ ಭೂಮಿ ನೀಡಲು ಸಾರ್ವಜನಿಕರು ಮುಂದಾದರೆ ಅಂತಹ ಜಮೀನು ಖರೀದಿಗೆ ಪ್ರಕ್ರಿಯೆ ಪ್ರಾರಂಭಿಸಲು ತಿಳಿಸಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್.ಎಸಿ-ಎಸ್.ಟಿ ವರ್ಗದವರು ಆಸ್ಪತ್ರೆಗೆ ಬರುವ ಸಮಯದಲ್ಲಿ ಜಾತಿ ಪ್ರಮಾಣ ಪತ್ರ ಬಿಟ್ಟು ಬಂದಲ್ಲಿ ತಾತ್ಕಾಲಿಕವಾಗಿ ಚಿಕಿತ್ಸೆ ಒದಗಿಸಬೇಕು ಬಳಿಕ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೋಗಿಗಳು ಚಿಕಿತ್ಸೆಗಾಗಿ ಭರಿಸಿದ ಮೊತ್ತವನ್ನು 48 ಗಂಟೆಯೊಳಗಾಗಿ ಜಾತಿ ಪ್ರಮಾಣಪತ್ರ ಒದಿಗಿಸದ್ದಲ್ಲಿ ಮೊತ್ತವನ್ನು ಮರಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಿಮ್ಸ್ ಆಸ್ಪತ್ರೆಯಲ್ಲಿ ಜರುಗಿದ ತರಬೇತಿಗೆ ವಿಭಾಗದ ಮುಖ್ಯಸ್ಥರುಗಳು ಹಾಜರಾಗಿರುವುದಿಲ್ಲ. ಮುಂದಿನ ಸಭೆಯೊಳಗಾಗಿ ಮತ್ತೋಮ್ಮೆ ಸಭೆ ಜರುಗಿಸಿ ಆಯಾ ವಿಭಾಗದ ಮುಖ್ಯಸ್ಥರುಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ
ಕರೆಪ್ಪ ಗುಡೆನ್ನವರ ಮಾತನಾಡಿ ಅರಣ್ಯ ಇಲಾಖೆಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮತ್ತು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಎಸ್. ಸಿ-ಎಸ್.ಟಿ ನೌಕರರಿಗೆ ನಿಯಮಾನುಸಾರ ಮುಂಬಡ್ತಿ ತಡವಾಗುತ್ತಿದೆ.
ಈಗಾಗಲೇ ಸಾಕಷ್ಟು ಬಾರಿ ಈ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಯಮಾನುಸಾರ ಮುಂಬಡ್ತಿ ಆದೇಶಿಸಬೇಕು ಎಂದು ಕರೆಪ್ಪ ಗುಡೆನ್ನವರ ಅವರು ತಿಳಿಸಿದರು.
ಪರಿಶಿಷ್ಟ ಸಮುದಾಯದವರಿಗೆ ಈಗಾಗಲೇ ಅಗತ್ಯ ಸ್ಥಳಗಳಲ್ಲಿ ಸ್ಮಶಾನಭೂಮಿ ಮಂಜೂರು ಮಾಡಲಾಗಿದೆ. ಮಂಜೂರು ಆಗಿರುವ ಭೂಮಿಗಳ ಅರಣ್ಯ ಪ್ರದೇಶದ ಭಾಗದಲ್ಲಿರುವ ಕಾರಣ ಅಂತಹ ಸ್ಥಳಗಳ ಬದಲಿಗೆ ಗ್ರಾಮಗಳ ಹತ್ತಿರದ ಉಳುಭೂಮಿಯಾದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈಗಾಗಲೇ ನಗರದ ಆರ್.ಪಿ.ಡಿ ವೃತ್ತಕ್ಕೆ ವೀರ ಮದಕರಿ ನಾಯಕ ಎಂದು ನಾಮಕರಣ ಮಾಡಲು ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚಿಸಲಾಗಿದೆ ಆದರೆ ಮದಕರಿ ನಾಯಕರ ಹೆಸರು ನಾಮಕರಣ ಬದಲಿಗೆ ಇತರೆ ಹೆಸರು ನಾಮಕರಣಕ್ಕೆ ಪಾಲಿಕೆ ಪರಿಷತ್ ನಲ್ಲಿ ತೀರ್ಮಾನಿಸಲಾಗಿದೆ.
ಮದಕರಿ ನಾಯಕರ ಹೆಸರು ನಾಮಕರಣಕ್ಕೆ 2020 ರಿಂದ ಈ ಕುರಿತು ನಿರಂತರ ವಿಷಯ ಪ್ರಸ್ತಾಪಿಸಲಾಗಿದೆ. ಕೂಡಲೇ ಇದನ್ನು ಕೈ ಬಿಟ್ಟು ಮದಕರಿ ನಾಯಕರ ಹೆಸರು ನಾಮಕರಣಕ್ಕೆ ಸೂಚಿಸಬೇಕು ಎಂದು ಕರೆಪ್ಪ ಗುಡೆನ್ನವರ ಒತ್ತಾಯಿಸಿದರು.
ಕಳೆದ ಮೂರು ತಿಂಗಳಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿ ಇತ್ಯರ್ಥ ಪಡಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ವಿತರಣೆಯಲ್ಲಿ ಯಾವುದೇ ಪ್ರಕರಣಗಳು ಬಾಕಿ ಇರುವದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಅವರು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ,
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಮುಖಂಡರಾದ ಮಲ್ಲೇಶ ಚೌಗಲಾ, ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಆಯಟ್ಟಿ, ವಿಜಯ ತಳವಾರ, ಸಿದ್ಧರಾಯ ಮೇತ್ರಿ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.********************************












lk4l41