ನೆರೆ ಹಾನಿ: ಬೆಳೆ ಪರಿಹಾರ ವಿತರಣೆಗೆ ವಿಳಂಬ ಬೇಡ; ರಸ್ತೆ, ಸೇತುವೆ ದುರಸ್ತಿಗೆ ಕ್ರಮವಹಿಸಿ: ಸಂಸದ ಜಗದೀಶ ಶೆಟ್ಟರ್…!!

ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ ಸಭೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಸೆ.20 : ಜಿಲ್ಲೆಯಲ್ಲಿಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರ ಒದಗಿಸಬೇಕು. ಜಂಟಿ ಸಮೀಕ್ಷೆಯಲ್ಲಿ ದಾಖಲಾಗದೇ ಇರುವಂತಹ ರೈತರನ್ನು ಗುರುತಿಸಿ ಅವರಿಗೂ ಸಹ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಜಗದೀಶ ಶೆಟ್ಟರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ(ಸೆ.20) ಜರುಗಿದ 2024-25ನೇ ಸಾಲಿನ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ಪರಿಹಾರ ಕಾರ್ಯದಲ್ಲಿ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಆದಷ್ಟು ಬೇಗನೆ ರೈತರಿಗೆ ಬೆಳೆ ಪರಿಹಾರ ಒದಗಿಸಲು ಕ್ರಮ ಜರುಗಿಸಿ, ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಹೇಳಿದರು.
ಬೆಂಬಲ ಬೆಳೆ ಖರೀದಿ ಕೇಂದ್ರಗಳಲ್ಲಿ ಖರಿದಿಸಲು ಗುರುತಿಸಲಾದ ಬೆಳೆಗಳ ಖರೀದಿ ಪ್ರಕ್ರಿಯೆಯನ್ನು ಕೂಡಲೆ ಪ್ರಾರಂಭಿಸಬೇಕು.
ಮಹಾನಗರ ಪಾಲಿಕೆಯ ಅಮೃತ ಯೋಜನೆ 1 ಹಾಗೂ 2 ರ ಯೋಜನೆಯಡಿ ನಿವೇಶನ ಹಂಚಿಕೆ ಕುರಿತು ಸಲ್ಲಿಸಲಾಗುವ ಪ್ರಸ್ತಾವನೆಗಳನ್ನು ಮಾರ್ಗಸೂಚಿಗಳನ್ವಯ ಸಿದ್ಧಪಡಿಸಿ ಕಳುಹಿಸಿಕೊಡುವದರ ಜೊತೆಗೆ ಪ್ರಸ್ತಾವನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುವಂತೆ ತಿಳಿಸಿದರು.
ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದಂತಹ ಫಲಾನುಭವಿಗಳಿಗೆ ಸೂಕ್ತವಾದ ತಿಳಿವಳಿಕೆ ನೀಡಬೇಕು. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಜಿ+3 ಮಾದರಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಸರಕಾರದಿಂದ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದಂತಹ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು.
ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳಿಗೆ ತುಂಬಾ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಗೂ ವರ್ತಕರೊಂದಿಗೆ ಸಭೆ ಜರುಗಿಸಿ ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆಯನ್ನು ವಿಸ್ತರಿಸಲು ಗಮನ ಹರಿಸಬೇಕು. ಇದರ ಜೊತೆಗೆ ಶೀಥಿಲ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡುವದರ ಜೊತೆಗೆ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಜರುಗಿಸಿ ಜಿಲ್ಲೆಯ ಪ್ರಮುಖ ಕೃಷಿ, ತೋಟಗಾರಿಕೆ ಬೆಳೆ, ಹೂವು ಹಾಗೂ ಹಣ್ಣುಗಳ ಉತ್ಪಾದನೆಯ ಅಂಕಿ ಅಂಶಗಳನ್ನು ನೀಡಲು ತಿಳಿಸಿದರು.
ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಾಗೂ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಸರ್ವ ಪ್ರಯತ್ನ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫಲಿತಾಂಶ ಸುಧಾರಣೆಗೆ ಗಮನ ಹರಿಸಬೇಕು ಎಂದರು
ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿಕಾರ್ಮಿಕರಿಗೆ ಕಾಲಮಿತಿಯೊಳಗಾಗಿಯೇ ಕೂಲಿ ವೇತನ ಪಾವತಿಸಬೇಕು. ಜಲ ಜೀವನಮಿಷನ ಯೋಜನೆಯಡಿ ಪ್ರತಿ ಮನೆಗೂ ನೀರು ಸರಬರಾಜು ಆಗುತ್ತಿರುವ ಕುರಿತು ಪರಿಶೀಲಿಸಿ ವರದಿ ನೀಡಲು ತಿಳಿಸಿದರು. ಕಿತ್ತೂರ ಕೈಗಾರಿಕಾ ಪ್ರದೇಶದ ಬಗ್ಗೆ ಮಾಹಿತಿ ಪಡೆದು ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ಬೇಕಾದಂತಹ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸು ದರ ಮೂಲಕ ಜಿಲ್ಲೆಯಲ್ಲಿ ಕೈಗಾರಿಕೊದ್ಯಮ ಉತ್ತೇಜಿಸಲು ಶೆಟ್ಟರ್ ತಿಳಿಸಿದರು.
ಶಿಷ್ಟಾಚಾರ ಉಲ್ಲಂಘಿಸಿದರೆ ಕ್ರಮ-ಎಚ್ಚರಿಕೆ:
ಕೇಂದ್ರ ಪುರಸ್ಕೃತ ಯೋಜನೆಗಳ ಯಾವುದೇ ಕಾಮಗಾರಿಗಳ ಪ್ರಾರಂಭಕ್ಕೂ ಮುನ್ನ ಸಂಬಂಧಿಸಿದ ಲೋಕಸಭಾ ಸದಸ್ಯರ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಜಗದೀಶ್ ಶೆಟ್ಟರ ಅವರು, ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಸಿದರು.
ಅಧಿಕಾರಿಗಳು ಸಭೆಗೆ ಬರುವದಕ್ಕೂ ಮುಂಚೆ ತಮ್ಮ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಸಂಸದರಾದ ಜಗದೀಶ ಶೆಟ್ಟರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮಾತನಾಡಿ, ಪ್ರವಾಹದ ಸಂದರ್ಭದಲ್ಲಿ ಕೆಲ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆಯದೇ ಜಾನುವಾರುಗಳಿಗೆ ಮೇವು ಪೂರೈಕೆ ಮಾಡದೆ ಇರುವ ಕುರಿತು ದೂರುಗಳು ಬಂದಿರುವ ಕುರಿತು ಸಭೆಯ ಗಮನಕ್ಕೆ ತಂದರು.
ಗೋಕಾಕ ಹಾಗೂ ಮೂಡಲಗಿ ಭಾಗದಲ್ಲಿ ಸೊಯಾಬಿನ್ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ತಿಳಿಸಿದರು. ವಿಕಲಚೇತನರ ಇಲಾಖೆಯಿಂದ ವಿತರಿಸಲಾಗುವ ತ್ರಿಚಕ್ರ ವಾಹನಗಳ ವಿತರಣೆಗೆ ಕ್ರಮ ಜರುಗಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ಭರ್ತಿಮಾಡಬೇಕು. ಹೊಸದಾಗಿ ನಿರ್ಮಾಣಗೊಂಡಂತಹ ಸರಕಾರಿ ಆಸ್ಪತ್ರೆಗಳ ಉದ್ಘಾಟನೆಗೂ ಮುಂಚೆಯೇ ಆಸ್ಪತ್ರೆಗೆ ಬೇಕಾದಂತಹ ವೈದ್ಯರು, ಸಿಬ್ಬಂದಿಗಳ ನೇಮಕ ಹಾಗೂ ಆಸ್ಪತ್ರೆಗೆ ಬೇಕಾದಂತಹ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಅತೀವೃಷ್ಟಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು ಪರಿಹಾರ ಪಡೆಯುವವರ ವಿವರಗಳನ್ನು ಆಯಾ ಗ್ರಾಮಪಂಚಾಯತ ಹಾಗೂ ಕೃಷಿ ಕೇಂದ್ರಗಳಲ್ಲಿ ಪ್ರಚುರ ಪಡಿಸಿದ್ದು ಈ ಕುರಿತು ಆಕ್ಷೇಪಣೆಗಳಿದ್ದರೆ ಅವುಗಳನ್ನು ಸರಿಪಡಿಸಿ ಅಂತಿಮ ಯಾದಿಯನ್ನು ತಯಾರಿಸಲಾಗುವದು ಎಂದರು.
ಶೀಘ್ರದಲ್ಲಿಯೇ ಸರಕಾರದ ಮಾರ್ಗಸೂಚಿಗಳನ್ವಯ ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದರು.
ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ದೋಣಿಗಳ ಅವಶ್ಯಕತೆ ಇರುವದು ಎಂದು ಅಧ್ಯಕ್ಷರ ಗಮನಕ್ಕೆ ತಂದು, ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆ, ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಅನುದಾನ ಬಿಡುಗಡೆ ಮಾಡಿ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಸಿ.ಇ.ಓ. ರಾಹುಲ್ ಶಿಂಧೆ ಅವರು ಸಭೆಯನ್ನು ನಿರ್ವಹಿಸಿದರು.
ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ರಾಜು (ಆಸೀಫ್) ಸೇಠ್, ವಿಠ್ಠಲ ಹಲಗೇಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.****************************