ವಿಶ್ವಕರ್ಮ ಸಮುದಾಯದ ಐತಿಹಾಸಿಕ ಸ್ಮಾರಕಗಳು ಮಂದಿರಗಳಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಮೂಲ್ಯ: ಬಸವರಾಜ ಹೊರಟ್ಟಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಸೆ.17: ವಿಶ್ವಕರ್ಮರು ವಿಶ್ವದ ಮೊದಲ ಶಿಲ್ಪಿಗಳು. ಅವರ ಕ್ರಿಯಾಶೀಲತೆ, ಸೃಜನಶೀಲತೆ ವಿಶೇಷವಾದದ್ದು. ಆದರೆ ಇಂದಿನ ವಿಜ್ಞಾನ,ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಸಮುದಾಯದ ಸೃಜನಶೀಲತೆ, ಕ್ರಿಯಾಶೀಲತೆ ಮರೆಯಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಭಗವಾನ ಭಗವಾನ ಶ್ರೀ ವಿಶ್ವಕರ್ಮ ಜಯಂತಿಯ ಅಂಗವಾಗಿ ಭಗವಾನ ಶ್ರೀ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಘನ ಉಪಸ್ಥಿತಿ ವಹಿಸಿ, ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಶ್ರಮದಿಂದ ಅನೇಕ ಐತಿಹಾಸಿಕ ಸ್ಮಾರಕಗಳು, ಮಂದಿರಗಳು, ದೇವತಾ ಶಿಲ್ಪಗಳು ರೂಪಗೊಂಡಿವೆ. ಸಮಯಪ್ರಜ್ಞೆ, ಸೂಕ್ಷ್ಮತೆ, ಕೌಶಲ್ಯ ಮತ್ತು ಅವರ ಕೆತ್ತನೆಯ ಭಕ್ತಿಯಿಂದ ಅನೇಕ ಅಪರೂಪದ ಕಲಾಕೃತಿಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಸಂಶೋಧನೆಗಳಿಂದಾಗಿ ಕ್ರಿಯಾಶೀಲತೆ, ಸೃಜನಶೀಲತೆ ಕಡಿಮೆ ಆಗುತ್ತಿದೆ. ಸ್ವತಃ ಚಿಂತನೆಯಲ್ಲಿ ತೊಡಗದೆ, ಎಲ್ಲದಕ್ಕೂ ಕಂಪ್ಯೂಟರ್ ಅವಲಂಬಿಸಿ, ತಮ್ಮ ವೃತ್ತಿ ಮಾಡಲು ಪ್ರಯತ್ನಿಸುತ್ತಾರೆ. ಇದು ವಿಶ್ವಕರ್ಮ ಸಮುದಾಯದವರ ವೃತ್ತಿಗೂ ಬಂದು ನಿಂತಿದೆ. ಹಳೆಯ ಕಟ್ಟಿಗೆ, ಕಲ್ಲು, ಆಭರಣಗಳ ಮೇಲಿನ ಆ ಸೂಕ್ಷ್ಮವಾದ, ಮನೋಜ್ಞವಾದ ಕೆತ್ತನೆ ಇಂದು ಕಣ್ಮರೆ ಆಗುತ್ತಿವೆ ಎಂದು ತಿಳಿಸಿದರು.
ಭಗವಾನ್ ವಿಶ್ವಕರ್ಮನ ಆರಾಧನೆಯು ವಿಶೇಷವಾಗಿ ಇಂಜಿನೀಯರಗಳು, ಕಾರ್ಮಿಕರು, ಕಾರ್ಖಾನೆಯ ಕೆಲಸಗಾರರು, ವಾಸ್ತುಶಿಲ್ಪಿಗಳು, ಬಡಗಿಗಳು ಮತ್ತು ಶಿಲ್ಪಿಗಳಿಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬರೂ ಕೆಲಸ ಮತ್ತು ವ್ಯವಹಾರ ಸೇರಿದಂತೆ ತಮ್ಮ ಪ್ರಯತ್ನಗಳಲ್ಲಿ ಯಶಸ್ಸಿಗೆ ಭಗವಾನ್ ವಿಶ್ವಕರ್ಮರ ಆಶೀರ್ವಾದವನ್ನು ಬಯಸುತ್ತಾರೆ ಎಂದು ಮಹಾನಗರ ಪಾಲಿಕೆಯ ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಶಲಕಲೆ ಎನ್ನುವುದು ಅನುವಂಶಿಕವಾಗಿ ಬೆಳೆದು ಬಂದಿದೆ. ಕಲಾಕೃತಿಗಳಿಗೆ ಜೀವಕಳೆ ತುಂಬುವ, ಸೌಂದರ್ಯ, ಶೃಂಗಾರ ತೊಡಿಸುವ ಚಾಣಾಕ್ಷತೆ ವಿಶ್ವಕರ್ಮ ಸಮುದಾಯದವರಿಗೆ ರಕ್ತಗತವಾಗಿ ಬಂದಿರುತ್ತದೆ. ನಮ್ಮ ನಾಡಿ ಕಲೆ, ಚಿತ್ರಕಲೆ, ಶಿಲ್ಪಕಲೆ, ಸ್ಮಾರಕಗಳ ರಚನೆಯನ್ನು ಅವಲೋಕಿಸಿದಾಗ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಅರಿವು ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಕೋಟುಮಚಗಿ ಅರಿವು ಕೇಂದ್ರದ ಗ್ರಂಥಪಾಲಕ ಸೂರ್ಯನಾರಾಯಣ ಈಶಪ್ಪ ಪತ್ತಾರ ಅವರು ರಾಷ್ಟ್ರಕ್ಕೆ ವಿಶ್ವಕರ್ಮ ಸಮುದಾಯ ನೀಡಿದ ಕಲೆ, ಸ್ಮಾರಕ, ಸಾಂಸ್ಕೃತಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಾಳಪ್ಪ ಬಡಿಗೇರ, ವಿಶ್ವಕರ್ಮ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಜಿ. ಕಮ್ಮಾರ, ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯುವ ಸಂಘದ ಅಧ್ಯಕ್ಷ ಸಂತೋಷ ಬಡಿಗೇರ, ಸಮಾಜದ ಮುಖಂಡರಾದ ವಸಂತ ಅರ್ಕಾಚಾರ ಸೇರಿದಂತೆ ಸಮುದಾಯದ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.**************************