ಪ್ರಕೃತಿ ಬೆಳಗಾವಿ

ಓಟು ಹಾಕಿದವರು, ಹಾಕದವರು ಎಲ್ಲರೂ ನಮ್ಮವರೆಂದು ತಿಳಿದು ಕೆಲಸ ಮಾಡುತ್ತಿದ್ದೇನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ರಾಮಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಕೋಟಿ ರೂ. ಅನುದಾನ ನೀಡಿದ ಸಚಿವರು…

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ. ಮತ ಹಾಕಿದವರು, ಮತ ಹಾಕದವರು ಎಲ್ಲರೂ ನಮ್ಮವರೇ ಎಂದು ಭಾವಿಸಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ತಾರಿಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ, ದೇವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುವವರೇ ಬೇರೆ, ನಾವು ಅಭಿವೃದ್ಧಿ ಕೆಲಸ ಮಾಡುವವರು, ಜನರ ಸೇವೆ ಮಾಡುವವರು ಎಂದರು ಹೇಳಿದರು.

ದೇವಸ್ಥಾನ ಅಭಿವೃದ್ಧಿಪಡಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ತಾರಿಹಾಳ ಗ್ರಾಮಸ್ಥರಿಗೆ ಮಾತುಕೊಟ್ಟಿದ್ದೆ, ಅದರಂತೆಯೇ ಇಂದು ಅದ್ದೂರಿಯಾಗಿ ರಾಮಲಿಂಗೇಶ್ವರ ದೇವಸ್ಥಾನವನ್ನು ಉದ್ಘಾಟಿಸಲಾಗಿದೆ. ದೇವಸ್ಥಾನಕ್ಕೆ ಒಂದು ಕೋಟಿ ರೂ. ಅನುದಾನ ಒದಗಿಸಿದ್ದೇನೆ. ಕ್ಷೇತ್ರದ ಜನರ ಬೆಂಬಲವೇ ನಾನು ಸಚಿವೆಯಾಗಲು ಕಾರಣ, ಗ್ರಾಮಸ್ಥರು ನನಗೆ ಆಶೀರ್ವಾದದ ಜೊತೆಗೆ ಮತ ನೀಡಿದರು ಎಂದು ಸಚಿವರು ಸ್ಮರಿಸಿದರು.

ನಾನು ದೇವರ ಮೇಲೆ ನಂಬಿಕೆ ಇಟ್ಟವಳು, ಆ ದೇವರ, ನಿಮ್ಮೆಲ್ಲರ ಆಶೀರ್ವಾದ ಇರುವುದರಿಂದಲೇ ದೊಡ್ಡ ಅಪಘಾತವಾದರೂ ಬದುಕಿ ಬಂದಿರುವೆ. ಇನ್ನು ಹತ್ತು ಹಲವು ಗುಡಿಗಳನ್ನು ಅಭಿವೃದ್ಧಿ ಪಡಿಸುವ ಸಂಕಲ್ಪ ಹೊಂದಿರುವೆ. ಆ ದೇವರು, ಜನರೇ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾನು ಶಾಸಕಿಯಾದ ಬಳಿಕ ಗುಡಿ ಗೋಪುರಗಳ ಜೀರ್ಣೋದ್ದಾರಕ್ಕೆ ಹೆಚ್ಚು ಒತ್ತು ನೀಡಿರುವೆ. ಶುಕ್ರವಾರ ಹೊನ್ನಿಹಾಳ ಗ್ರಾಮದಲ್ಲಿ ವಿಠಲ ಬೀರ ದೇವರ ದೇವಸ್ಥಾನ ಉದ್ಘಾಟಿಸಲಾಯಿತು. ಈ ವೇಳೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ 5 ದಿನಗಳ ಕಾಲ ಅನ್ನಸಂತರ್ಪಣೆಯನ್ನೂ ಮಾಡಲಾಯಿತು. ಬಡಾಲ ಅಂಕಲಗಿ ಗ್ರಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಲಕ್ಷ್ಮೀ ದೇವಿ ದೇವಸ್ಥಾನ ಹಾಗೂ ತುರಮುರಿ ಗ್ರಾಮದಲ್ಲಿ ನೂತನ ಶ್ರೀ ಜ್ಯೋತಿರ್ಲಿಂಗ ಮಂದಿರವನ್ನು ಉದ್ಘಾಟಿಸಿದೆ ಎಂದು ತಿಳಿಸಿದರು.

ಅಭಿವೃದ್ಧಿ ಒಂದೇ ನನ್ನ ಮೂಲ ಮಂತ್ರ, ರಾಮೇಶ್ವರ, ಕಾಶಿ ವಿಶ್ವನಾಥ ಎಲ್ಲರಿಗೂ ಶಕ್ತಿಯನ್ನು ಕೊಡಲಿ. ಗ್ರಾಮಸ್ಥರು ಒಟ್ಟಾಗಿ ಸೇರಿ ಅದ್ಭುತವಾಗಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ನಾವು ಮಾಡುವ ಒಳ್ಳೆಯ ಕೆಲಸಗಳು ನೂರಾರು ವರ್ಷ ಇರುತ್ತವೆ. ದೇವಸ್ಥಾನದ ಅಭಿವೃದ್ಧಿಗೆ ಕೋಟಿ ರೂಪಾಯಿ ಕೊಟ್ಟರೂ ಅಷ್ಟೇ 100 ರೂಪಾಯಿ ಕೊಟ್ಟರೂ ಅಷ್ಟೇ. ಕೊಡುವಂತ ಹೃದಯ ಶ್ರೀಮಂತವಾಗಿರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಬಡೇಕೊಳ್ಳಿಮಠದ ಸದ್ಗುರು ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳು, ನಾಗಯ್ಯ ಪೂಜಾರ, ಪ್ರಮೊದ್ ಜಾಧವ್, ಯಲ್ಲಪ್ಪ ಖನಗಾಂವ್ಕರ್, ಸ್ವಪ್ನಿಲ್ ಜಾಧವ್, ಸಿದ್ದಣ್ಣ ಖನಗಾಂವ್ಕರ್, ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮದ ಅನೇಕ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.*************************

Leave a Reply

Your email address will not be published. Required fields are marked *

Back to top button