ನಿರ್ಮಾಣ ತಾಂತ್ರಿಕತೆ ಕ್ಷೇತ್ರದಲ್ಲಿ ನಿರ್ಮಿತಿ ಕೇಂದ್ರದ ಕೊಡುಗೆ ಅಪಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೆಚ್ಚುಗೆ…!!

ಜಿಲ್ಲಾ ನಿರ್ಮಿತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಮಾ.30 : ಭಾರತ ಸರ್ಕಾರ/ಹುಡ್ಕೋ ಮತ್ತು ಕರ್ನಾಟಕ ಸರ್ಕಾರದ ಪ್ರೋತ್ಸಾಹಿತ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಗಣೇಶಪುರ ಲಕ್ಷ್ಮೀ ಟೇಕ್ ಹತ್ತಿರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಿಂಬಾಗದಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ನಿರ್ಮಿತಿಕೇಂದ್ರದ ನೂತನ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ರವಿವಾರ (ಮಾ.30) ಉದ್ಘಾಟಿಸಿದರು.
ಬಳಿಕ ಜಿಲ್ಲಾ ನಿರ್ಮಿತಿ ಕೇಂದ್ರದ ನೂತನ ಕಟ್ಟಡದ ಗುಣಮಟ್ಟ, ವಿನ್ಯಾಸ, ಕಚೇರಿಯ ಕೊಠಡಿಗಳು, ಮುಂಭಾಗದ ಉದ್ಯಾನವನ ವೀಕ್ಷಿಸಿದ ಸಚಿವರು, ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಿರ್ಮಿತಿ ಕೇಂದ್ರವು ನಿರ್ಮಾಣ ಹಾಗೂ ತಾಂತ್ರಿಕತೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ನೂತನ ತಂತ್ರಜ್ಞಾನ ಆಧಾರಿತ ಕಟ್ಟಡ ನಿರ್ಮಾಣ ವಸ್ತುಗಳ ಆವಿಷ್ಕಾರ-ತಯಾರಿಕೆ-ಬಳಕೆಗೆ ನಿರ್ಮಿತಿ ಕೇಂದ್ರ ಹೆಚ್ಚು ಒತ್ತು ನೀಡಿದೆ ಎಂದರು.
ನಿರ್ಮಿತಿ ಕೇಂದ್ರ ಜಿಲ್ಲೆಯ ಹಲವು ಪ್ರಮುಖ ಸರ್ಕಾರಿ ಕಟ್ಟಡಗಳನ್ನು ರೂಪಿಸಿದ ಹಿರಿಮೆ ಹೊಂದಿದೆ. ನೂತನ ತಂತ್ರಜ್ಞಾನ ಬಳಸಿ, ಅತೀ ಕಡಿಮೆ ವೆಚ್ಚದಲ್ಲಿ ಅಂದದ ಕಟ್ಟಡಗಳನ್ನು ನಿರ್ಮಿಸಿರುವುದು ಜಿಲ್ಲಾ ನಿರ್ಮಿತಿ ಕೇಂದ್ರದ ವೈಶಿಷ್ಟ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಕುರಡಗಿ ಸೇರಿದಂತೆ ಜಿಲ್ಲಾ ನಿರ್ಮಿತಿ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.*************************